ಚಿಕ್ಕೋಡಿ: ಮಹಾರಾಷ್ಟ್ರ ಕೊಂಕಣ ಭಾಗದ ಕೊಯ್ನಾ, ಮಹಾಬಲೇಶ್ವರ, ವಾರಣಾ, ನವಜಾ, ರಾಧಾನಗರಿ ಮತ್ತು ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಅಬ್ಬರ ಕ್ಷೀಣಿಸಿದ್ದು, ಕೊಯ್ನಾ ಜಲಾಶಯದಿಂದ ಬಿಡುವ ನೀರಿನ ಪ್ರಮಾಣವೂ ತಗ್ಗಿದೆ. ಮತ್ತೆ ಮಳೆ ಸುರಿದರೆ ಮಾತ್ರ ನದಿಗಳ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.
ಕಳೆದೆರಡು ವಾರಗಳಿಂದ ಮಹಾರಾಷ್ಟ್ರದ ಜಲಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕೋಯ್ನಾ, ವಾರಣಾ, ಕಾಳಮ್ಮವಾಡಿ ಮತ್ತು ರಾಧಾನಗರಿ ಜಲಾಶಯದಿಂದ ಅಪಾರ ಪ್ರಮಾಣ ನೀರು ಹೊರಬರುತ್ತಿದೆ. ಕೃಷ್ಣಾ ದೂದಗಂಗಾ ಮತ್ತು ವೇದಗಂಗಾ ನದಿಗಳಲ್ಲಿ ಸಂಭವನೀಯ ಪ್ರವಾಹ ಎದುರಾಗಿದ್ದು, ನೀರಿನ ಮಟ್ಟ ಹೆಚ್ಚಳವಾಗುವುದರಿಂದ ಚಿಕ್ಕೋಡಿ ಉಪವಿಭಾಗದ ನದಿ ತೀರದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.65 ಲಕ್ಷ ಕ್ಯೂಸೆಕ್, ಧೂಮ್ ಡ್ಯಾಂನಿಂದ 848 ಕ್ಯೂಸೆಕ್, ಕನ್ನೇರ್ ಡ್ಯಾಂನಿಂದ 1,776 ಕ್ಯೂಸೆಕ್, ವಾರಣಾ ಡ್ಯಾಂನಿಂದ 4,551 ಕ್ಯೂಸೆಕ್, ರಾಧಾನಗರಿ ಡ್ಯಾಂನಿಂದ 1,400 ಕ್ಯೂಸೆಕ್, ಧೂದಗಂಗಾ ಡ್ಯಾಂನಿಂದ 900 ಕ್ಯೂಸೆಕ್ ನೀರು ಕೃಷಾ ನದಿಗೆ ಹರಿದು ಬರುತ್ತಿದ್ದು, ಒಟ್ಟಾರೆಯಾಗಿ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ 1,98,238 ಕ್ಯೂಸೆಕ್ ನೀರು ಹರಿದು ಬಂದಿದೆ.