ಬೆಳಗಾವಿ: ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಯನ್ನೇ ಪುಡಿರೌಡಿಗಳು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ತಾಲೂಕಿನ ಕೆ.ಎಚ್. ಬಾಳೆಕುಂದ್ರಿ ಗ್ರಾಮದಲ್ಲಿ ನಡೆದಿದೆ.
ಪೇದೆ ರಾಜು ಎಂಬುವವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಳೆಕುಂದ್ರಿ ಗ್ರಾಮದಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮದ ಭದ್ರತೆಗೆ ಪೇದೆ ರಾಜು ನಿಯೋಜನೆಗೊಂಡಿದ್ದರು. ಲೌಡ್ ಸ್ಪೀಕರ್ನಿಂದ ತೊಂದರೆಯಾಗುತ್ತಿದೆ ಎಂದು ಗೌಸ್ ಕುಡಚಿ, ಬಾಬು ಕುಡಚಿ, ಮುಸ್ತಾಕ್ ಕುಡಚಿ ಎಂಬ ಮೂವರು ಜಗಳವಾಡುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೇದೆ ರಾಜು ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಪೇದೆಯನ್ನು ಸಹ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದ್ದು, ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.