ಅಥಣಿ: ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ದರೂರ ಗ್ರಾಮದಲ್ಲಿ ನಡೆದಿದೆ.
ಮನೋಜ ಧರ್ಮಣ್ಣ ರಾಮಥಿರ್ತ (42) ಮೃತ ವ್ಯಕ್ತಿ. ಮನೋಜ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ. ಇಂದು ಬೆಳಿಗ್ಗೆ ಆತನ ಮಗ ಕಬ್ಬಿನ ಗದ್ದೆಗೆ ಮೇವು ತರಲು ಹೋದಾಗ ನಾಯಿಗಳ ಹಿಂಡು ಹಾಗೂ ದುರ್ನಾತ ಬರುವುದನ್ನು ಗಮನಿಸಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮನೋಜ ರಾಮಥಿರ್ತ ಶವ ಕಂಡುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್ಐ ಉಸ್ಮಾನ್ ಅವಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.