ಬೆಳಗಾವಿ : ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ತಾಲೂಕಿನ ಬಾಚಿ ಗ್ರಾಮದ ಚೆಕ್ ಪೋಸ್ಟ್ಗೆ ಡಿಸಿಪಿ ಡಾ.ವಿಕ್ರಮ ಆಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಿಬ್ಬಂದಿ, ಅಧಿಕಾರಿಗಳಿಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ-ಮಹಾರಾಷ್ಟ್ರ ಗಡಿ ಭಾಗದಲ್ಲಿ 8 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಬಸ್ ನಿಲ್ದಾಣ, ಏರ್ಪೋರ್ಟ್, ರೈಲು ನಿಲ್ದಾಣ, ಕಾಕತಿಯಲ್ಲಿ ಚೆಕ್ ಪೋಸ್ಟ್.
ಬಸ್ ನಿಲ್ದಾಣದಲ್ಲಿ ಸೇರಿ ಒಟ್ಟು 5, ರೈಲು ನಿಲ್ದಾಣದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಹೀಗಾಗಿ, ಗಡಿಯಲ್ಲಿರುವ ಚೆಕ್ ಪೋಸ್ಟ್ನಲ್ಲಿ ಆಶಾ, ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದರು.
ಓದಿ: ನೂತನ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಆಗಸ್ಟ್ 9ರಂದು ಪ್ರಕಟವಾಗಲಿದೆ SSLC ಫಲಿತಾಂಶ
ಪ್ರೆಸ್ಬೋರ್ಡ್ ಹಾಕಿಕೊಂಡವನ ಬೈಕ್ ಸೀಜ್:
ಮಹಾರಾಷ್ಟ್ರದಿಂದ ಆಗಮಿಸಿದ್ದ ಬೈಕ್ ಸವಾರನೊಬ್ಬ ಪ್ರೆಸ್ ಎಂದು ಹೇಳಿಕೊಂಡು ಬೆಳಗಾವಿ ಗಡಿ ಪ್ರವೇಶಿಸುತ್ತಿದ್ದನು. ಈ ವೇಳೆ ತಡೆದ ಪೊಲೀಸರು ಆತನನ್ನು ತಪಾಸಣೆ ನಡೆಸಿದರು. ಆಗ ಆತ ನಾನು ಖಾಸಗಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದನು.
ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಆತನ ಕೋವಿಡ್ ನೆಗಟಿವ್ ವರದಿ ಜೊತೆಗೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಐಡಿ ತೋರಿಸುವಂತೆ ತಿಳಿಸಿದರು. ಆದರೆ, ಸಂಬಂಧಿಸಿದ ಯಾವ ದಾಖಲೆಗಳು ಆತನ ಬಳಿ ಇಲ್ಲದಿದ್ದಾಗ ಬೈಕ್ ಸೀಜ್ ಮಾಡುವಂತೆ ಸಿಬ್ಬಂದಿಗೆ ಸೂಚನೆ ಕೊಟ್ಟರು.