ಬೆಳಗಾವಿ: ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬುವುದು ಕೇವಲ ಊಹಾಪೋಹ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಈಗಾಗಲೇ ಸಿಎಂ ಬಿಎಸ್‌ವೈ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂಗೆ ಇರೋ ಪರಮಾಧಿಕಾರವನ್ನು ಯಾರೂ ಪ್ರಶ್ನೆ ಮಾಡಲು ಬರುವುದಿಲ್ಲ. ಅವರಿಗಿರೋ ಪರಮಾಧಿಕಾರ ಬಳಸಿ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುತ್ತಾರೆ. ಇದೇ ತಿಂಗಳ ನಾಲ್ಕರೊಳಗೆ ಮಂತ್ರಿ ಮಂಡಲ ವಿಸ್ತರಣೆ ಆಗಲಿದೆ. ಆಗ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ. ಸಿಎಂ ಪಕ್ಷದ ರಾಷ್ಟ್ರೀಯ ವರಿಷ್ಠರ ಜತೆ ಚರ್ಚೆ ಮಾಡಿ ಬಂದಿದ್ದಾರೆ. ಸಿಎಂಗೆ ಎಲ್ಲಾ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ಇನ್ನು ವಿಧಾನ ಪರಿಷತ್‌ಗೆ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದ ಸೂಚನೆ ಬಂದ ಮೇಲೆ ವಿಧಾನ ಪರಿಷತ್‌ಗೆ ನಾಮಿನೇಷನ್ ಸಲ್ಲಿಸುತ್ತೇನೆ. ಇನ್ನೂ ಯಾರೂ ಸಹ ನನ್ನ ಸಂಪರ್ಕಿಸಿಲ್ಲ. ಇಂದು ಹಾಸನಕ್ಕೆ ಹೋಗ್ತಿದ್ದೇನೆ. ನಾಳೆ ಧಾರವಾಡ ಪ್ರವಾಸದಲ್ಲಿದ್ದೇನೆ. ಫೆಬ್ರವರಿ ಮೂರರಂದು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಹೋದ ಮೇಲೆ ಸಿಎಂ, ಪಕ್ಷದ ಅಧ್ಯಕ್ಷರನ್ನು ಭೇಟಿಯಾಗುತ್ತೇನೆ. ಅವರೇನು ಸೂಚನೆ ಕೊಡ್ತಾರೆ ಅದರ ಮೇಲೆ ನಿರ್ಣಯ ಕೈಗೊಳ್ಳುವೆ ಎಂದರು.
ಇನ್ನು ಡಿಸಿಎಂ ಹುದ್ದೆ ಕುರಿತು ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಅನೇಕ ರಾಜ್ಯಗಳಲ್ಲಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಿದ್ದಾರೆ. ಈ ಹಿಂದೆಯೂ ನಮ್ಮ ರಾಜ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದ ಉದಾಹರಣೆಗಳಿವೆ. ಅದರಂತೆ ನಮಗೂ ಜವಾಬ್ದಾರಿ ಕೊಟ್ಟಿದ್ದಾರೆ. ಚೆನ್ನಾಗಿ ಕೆಲಸ ಮಾಡುತಿದ್ದೇವೆ. ಅದರ ಬಗ್ಗೆ ರಾಷ್ಟ್ರದ ನಾಯಕರು ಪ್ರತಿಕ್ರಿಯಿಸುತ್ತಾರೆ. ಸಹಿ ಸಂಗ್ರಹ ಮಾಡಿಲ್ಲ ಅಂತ ರೇಣುಕಾಚಾರ್ಯರೇ ಸ್ಪಷ್ಟಪಡಿಸಿದ್ದಾರೆ. ಈಗ ಆ ಚರ್ಚೆ ಅನಗತ್ಯ ಎಂದರು.
ನಮಗೂ ಸಚಿವ ಸ್ಥಾನ ಬೇಕು ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಹೆಚ್.ವಿಶ್ವನಾಥ್ ಕೇಳೋದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಕೇಳೋ ಹಕ್ಕಿದೆ, ತೀರ್ಮಾನ ಮಾತ್ರ ಹೈಕಮಾಂಡ್ ಮಾಡುತ್ತೆ ಎಂದರು.