ಅಥಣಿ(ಬೆಳಗಾವಿ): ಅಥಣಿ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಖರೀದಿಸಿದ ಆಧುನಿಕ ಸುಸಜ್ಜಿತ ಆ್ಯಂಬುಲೆನ್ಸ್ನ್ನು ಸಚಿವ ಲಕ್ಷ್ಮಣ ಸವದಿ ತಾಲೂಕಿನ ಸಮುದಾಯ ಆಸ್ಪತ್ರೆಗೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ವರ್ಷ ಬೆಳಗಾವಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಅಥಣಿ ಆ್ಯಂಬುಲೆನ್ಸ್ ಬೆಂಕಿಗೆ ಆಹುತಿಯಾಗಿ ತಾಲೂಕಿನ ಸಮುದಾಯ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕೊರತೆಯಾಗಿತ್ತು. ಹಾಗಾಗಿ, 2020-21 ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ಅಡಿಯಲ್ಲಿ ಎರಡು ಆ್ಯಂಬುಲೆನ್ಸ್ ಖರೀದಿಸಲಾಗಿದೆ. ಇದರಲ್ಲಿ ಒಂದು ಆ್ಯಂಬುಲೆನ್ಸ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಬೆಳಗಾವಿ, ಮಿರಜ್ ದೂರದ ಆಸ್ಪತ್ರೆಗಳಿಗೆ ಹೋಗಲು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಅಥಣಿ ಸಮುದಾಯ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಎರಡು ಡಯಾಲಿಸಿಸ್ ಮಷಿನ್ಗಳನ್ನು ಅಳವಡಿಸಲಾಗುವುದು. ಸಕ್ಕರೆ ಕಾಯಿಲೆ ಇದ್ದವರಿಗೆ ಪರೀಕ್ಷೆಗೆ ಪ್ರತಿವಾರವೂ ಖಾಸಗಿ ಆಸ್ಪತ್ರೆಗಳಲ್ಲಿ ಮೂರು ಸಾವಿರ ರೂಪಾಯಿ ಖರ್ಚಾಗುತ್ತದೆ. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಷಿನ್ ಅಳವಡಿಸಿದರೆ ತಾಲೂಕಿನ ಸಕ್ಕರೆ ರೋಗಿಗಳಿಗೆ ಅನುಕೂಲವಾಗುತ್ತದೆ.
ಮುಂಬರುವ ದಿನಗಳಲ್ಲಿ ಅಥಣಿ ತಾಲೂಕಿನ ಪ್ರಾಥಮಿಕ ಹಾಗೂ ತಾಲೂಕು ಸಮುದಾಯದ ಆಸ್ಪತ್ರೆಯ ಪ್ರತಿಯೊಂದು ಆ್ಯಂಬುಲೆನ್ಸ್ಗಳಲ್ಲಿ ಆಕ್ಸಿಜನ್ ಅಳವಡಿಸಲಾಗುವುದು. ಈ ಕಾರ್ಯ ಸದ್ಯ ಪ್ರಾರಂಭದಲ್ಲಿದೆ ಎಂದು ಸವದಿ ಹೇಳಿದರು.
ಇದನ್ನೂ ಓದಿ: ಪಾಕೆಟ್ ವೆಂಟಿಲೇಟರ್ ಆವಿಷ್ಕರಿಸಿದ ವಿಜ್ಞಾನಿ... ಹೀಗಿದೆ ಇದರ ಪ್ರಯೋಜನ!