ಬೆಳಗಾವಿ: ಪ್ರವಾಹದಲ್ಲಿ ಕಂಗೆಟ್ಟಿದ್ದ ರೈತನ ಮೇಲೆಹೊರಡಿಸಲಾಗಿದ್ದ ಅರೆಸ್ಟ್ ವಾರಂಟ್ ಮರಳಿ ಪಡೆಯುವಂತೆ ಬೆಳಗಾವಿ ಡಿಸಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಐಸಿಐಸಿಐ ಬ್ಯಾಂಕ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರವಾಹದಲ್ಲಿ ಬೈಲಹೊಂಗಲ ತಾಲೂಕಿನ ಏಣಗಿ ಗ್ರಾಮದ ರೈತ ಈರಪ್ಪ ಹುಬ್ಬಳ್ಳಿ ಎಂಬುವವರಿಗೆ ಐಸಿಐಸಿಐ ಬ್ಯಾಂಕ್ ಹುಬ್ಬಳ್ಳಿ ಕೆಎಂಎಫ್ ಕೋರ್ಟ್ ಮೂಲಕ ಅರೆಸ್ಟ್ ವಾರಂಟ್ ಜಾರಿ ಮಾಡಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಕೂಡ ಪ್ರಸಾರವಾಗಿತ್ತು. ಈ ಹಿನ್ನೆಲೆ ತಕ್ಷಣವೇ ಬೈಲಹೊಂಗಲ ಶಾಖೆಯ ಮ್ಯಾನೇಜರ್ ಜೊತೆಗೆ ಫೋನ್ ಮೂಲಕ ಮಾತನಾಡಿದ ಡಿಸಿ, ರೈತ ಈರಪ್ಪ ಹುಬ್ಬಳ್ಳಿ ಸಾಲಮನ್ನಾ ಯೋಜನೆಗೆ ಒಳಪಡುತ್ತಾರೆ. ಹೀಗಾಗಿ ರೈತನಿಗೆ ನೀಡಿದ್ದ ಅರೆಸ್ಟ್ ವಾರಂಟ್ ಹಿಂಪಡೆಯುವಂತೆ ಸೂಚನೆ ನೀಡಲಾಗಿದೆ. ಕಾನೂನು ತಜ್ಞರ ಸಲಹೆ ಪಡೆದು ವಾರಂಟ್ ಹಿಂಪಡೆಯುವುದಾಗಿ ಬ್ಯಾಂಕ್ ಹೇಳಿದೆ ಎಂದು ಡಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಪ್ರವಾಹದಿಂದ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರಿಗೆ ತೊಂದರೆ ಆಗದಂತೆ ನಿಗಾ ವಹಿಸುವಂತೆ ಸಿಎಂ ಯಡಿಯೂರಪ್ಪ ಅವರು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಎಲ್ಲಾ ಬ್ಯಾಂಕ್ ಮುಖ್ಯಸ್ಥರ ಜತೆಗೆ ಸಭೆ ನಡೆಸಲಾಗಿತ್ತು. ರೈತರ ಹಿತ ಕಾಪಾಡಲಾಗುವುದು. ಇನ್ನು ಮುಂದೆ ರೈತರಿಗೆ ನೋಟಿಸ್, ಅರೆಸ್ಟ್ ವಾರಂಟ್ ಹೊರಡಿಸುವ ಬ್ಯಾಂಕ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಬೊಮ್ಮನಹಳ್ಳಿ ಇದೇ ವೇಳೆ ತಿಳಿಸಿದರು.