ಚಿಕ್ಕೋಡಿ : ಕೃಷ್ಣಾ ನದಿಯಲ್ಲಿ ನೀರಿನ ಏರಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಕೆಲ ಗ್ರಾಮಗಳು ಮುಳುಗಡೆಯಾಗಿದ್ದು, ಕೆಲ ಗ್ರಾಮಗಳು ಪ್ರವಾಹದ ಆತಂಕದಲ್ಲಿವೆ. ಈ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಸ್ .ಬಿ .ಬೊಮ್ಮನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡುವ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಕೃಷ್ಣ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈಗಾಗಲೇ ಒಂದು ತಿಂಗಳಿಂದ ನಾವು ನಮ್ಮ ಅಧಿಕಾರಿಗಳಿಗೆ ಪ್ರವಾಹದ ವೇಳೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ತರಬೇತಿಯನ್ನು ನೀಡಿದ್ದೇವೆ ಎಂದರು.
ಅಲ್ಲದೇ ಮಹಾರಾಷ್ಟ್ರದಿಂದ ದಿನಕ್ಕೆ ಎಷ್ಟು ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ಪಡೆದಿದ್ದೇವೆ. ಮುಂಜಾಗ್ರತೆಯಾಗಿ ನದಿ ತೀರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಡುಗಡ್ಡೆಯಲ್ಲಿ ಸಿಲುಕಿದ ಜನರನ್ನು ಎನ್ಡಿಆರ್ಎಫ್ ತಂಡ ಬೊಟ್ಗಳ ಮೂಲಕ ರಕ್ಷಿಸುತ್ತಿದೆ ಎಂದು ಹೇಳಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ, ಮಾಂಜರಿವಾಡಿ, ಯಡೂರುವಾಡಿ, ಇಂಗಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅವಶ್ಯಕತೆ ಬಿದ್ದರೆ ಸೇನೆ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಲಾಗುವುದು. ಸಂಜೆ ಎನ್ಡಿಆರ್ಎಫ್ ತಂಡ ತಾಲೂಕಿಗೆ ಬರುವುದಾಗಿ ಮಾಹಿತಿ ನೀಡಿದರು. ಸಂಸ್ತ್ರಸ್ತರಿಗಾಗಿ ಈಗಾಗಲೇ ಆಯಾಯ ಹಳ್ಳಿಗಳ್ಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದರು.