ಬೆಳಗಾವಿ: ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆರೋಪಿ ಬಸನಗೌಡ ಪಾಟೀಲ್ ಪುತ್ರಿ ರೋಹಿಣಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಚಿತ್ರಹಿಂಸೆ ನೀಡಿ ನಮ್ಮ ತಂದೆಯನ್ನು ಕೊಂದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೋಹಿಣಿ, ನಮ್ಮ ತಂದೆಯ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ನಮಗೆ ನ್ಯಾಯ ಸಿಗಬೇಕು. ಬಿಪಿ, ಶುಗರ್ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ತಂದೆಯ ಕೈಗೆ ಹಗ್ಗ ಕಟ್ಟಿ, ಚಿತ್ರಹಿಂಸೆ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
'ನಿನ್ನೆ ಮಧ್ಯಾಹ್ನ ನನ್ನ ತಂದೆಯನ್ನು ಕರೆದಕೊಂಡು ಹೋಗಿದ್ದಾರೆ. ರಾತ್ರಿ ಫೋನ್ ಮಾಡಿ ತಕ್ಷಣ ಬನ್ನಿ ಎಂದು ಪೊಲೀಸರು ಹೇಳಿದ್ರು. ರಾತ್ರಿ 10ಕ್ಕೆ ಬಂದು ನೋಡಿದಾಗ ತಂದೆ ಬೆಡ್ ಮೇಲೆ ಇದ್ರು. ವೈದ್ಯರು ಇನ್ನೂ ಜೀವ ಹೋಗಿಲ್ಲ ಎಂದು ಹೇಳಿದ್ರು. ನಾನು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದರಿಂದ ತಂದೆಯ ಪಲ್ಸ್ ನೋಡಿದೆ. ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆಮೇಲೆ ವೈದ್ಯರು ನಿಮ್ಮ ತಂದೆ ಇನ್ನಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ ಪೊಲೀಸರ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದ ಸಾವು: ಸಿಐಡಿ ತನಿಖೆಗೆ ಶಿಫಾರಸು
ನಮ್ಮ ಕುಟುಂಬದ ದೀಪ ಆರಿಹೋಗಿದೆ. ನಾನು, ನಮ್ಮ ಅಣ್ಣ ಇನ್ನೂ ಓದಬೇಕು. ತಂದೆಯ ವಿರುದ್ಧ ಕೇಸ್ ಇರೋ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ತಂದೆಯ ಜೀವಕ್ಕೆ ನ್ಯಾಯ ಬೇಕು. ಎರಡು ಕೈಗಳ ಮೇಲೆ ಹಗ್ಗ ಕಟ್ಟಿರೋ ಮಾರ್ಕ್ ಇದೆ. ಇದು ಯಾವುದೇ ಹಾರ್ಟ್ ಅಟ್ಯಾಕ್ ಅಲ್ಲವೇ ಅಲ್ಲ. ಒಂದು ವೇಳೆ ಹೃದಯಾಘಾತದ ಲಕ್ಷಣ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಸೇರಿಸಬೇಕಿತ್ತು. ಆದ್ರೆ, ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಆಸ್ಪತ್ರೆಗೆ ಸೇರಿದ್ದಾರೆ. ಈ ಬಗ್ಗೆ ನ್ಯಾಯಾಧೀಶರಿಗೆ ಹೇಳಿಕೆ ನೀಡಿದ್ದೇನೆ' ಎಂದರು.
ಇಂದು ಬೆಳಗ್ಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಡಾ. ಬಿ ಎಂ ಬೋರಲಿಂಗಯ್ಯ ಅವರು, ಈ ಕುರಿತು ಸಿಐಡಿ ತನಿಖೆಗೆ ಶಿಫಾರಸು ಮಾಡಿರುವುದಾಗಿ ಹೇಳಿದ್ದರು. ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ ಎಂದಿದ್ದರು.
ಪ್ರಕರಣ ಹಿನ್ನೆಲೆ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಪಾಟೀಲ್ ಅವರನ್ನು ಶುಕ್ರವಾರ ಪೊಲೀಸರು ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.