ಬೆಳಗಾವಿ : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬೆಳಗಾವಿ ಪ್ರವಾಸ ಪೂರ್ವ ನಿಯೋಜಿತವಾಗಿರಲಿಲ್ಲ. ನಾನು ನನ್ನ ಕ್ಷೇತ್ರದ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದೆ. ಅವರು ಬೆಳಗಾವಿಗೆ ಬರುವ ಮೊದಲೇ ನಾನು ಬೆಂಗಳೂರಿನಲ್ಲಿದ್ದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಸ್ಪಷ್ಟಪಡಿಸಿದರು.
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಡಿ ಕೆ ಶಿವಕುಮಾರ್ ಅವರನ್ನು ಇಂದು ಭೇಟಿಯಾಗಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ಬೆಂಗಳೂರಿನಿಂದ ಬಂದ ತಕ್ಷಣವೇ ಡಿಕೆಶಿ ಭೇಟಿ ಮಾಡಲು ಆಗಮಿಸಿರುವೆ ಎಂದರು. ಬಳಿಕ, ಡಿಕೆಶಿ ಅವರ ಸ್ವಾಗತಕ್ಕೆ ಗೈರಾಗಿದ್ದರಿಂದ ಪಕ್ಷಕ್ಕೆ ಮುಜುಗರ ಆಯಿತಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಆ ರೀತಿ ಏನೂ ಇಲ್ಲ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ. ಡಿಕೆ ಶಿವಕುಮಾರ ಅವರು ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನನಗೇನೂ ಆ ಅನುಭವ ಆಗಿಲ್ಲ. ಹಾಗೆಯೇ ಡಿಸಿಎಂ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ವೈಮನಸ್ಸಿಲ್ಲ ಎಂದು ಹೇಳಿದರು.
ಕುಸ್ತಿ ನೋಡಲು ಮೈಸೂರಿಗೆ ತೆರಳಿದ್ದ ಕುರಿತು ಮಾತನಾಡಿ, "ಮೈಸೂರಿನಲ್ಲಿ ನಮ್ಮ ಇಬ್ಬರು ಸ್ನೇಹಿತರಿದ್ದಾರೆ. ಅವರು ಹಿಂದಿನ ವರ್ಷವೂ ಔತಣಕೂಟ ಏರ್ಪಡಿಸಿ, ನಮ್ಮನ್ನು ಕರೆದಿದ್ದರು. ಆಗಲೂ ಹೋಗಿದ್ದೆವು. ಬಸ್ನಲ್ಲಿ ನಾವು ಹೋಗಿರಲಿಲ್ಲ, ಸುಮ್ಮನೆ ಮಾಧ್ಯಮಗಳು ಏನೆನೋ ಸೃಷ್ಟಿಸುತ್ತಿವೆ" ಎಂದರು.
ಕಿತ್ತೂರು ಉತ್ಸವಕ್ಕೆ ಸಿಎಂ ಬರಲ್ಲ : ಪ್ರತಿ ವರ್ಷದಂತೆ 23 ರಂದು ಕಿತ್ತೂರು ಉತ್ಸವ ಉದ್ಘಾಟನೆ ನಡೆಯಲಿದ್ದು, ದಸರಾ ಹಿನ್ನೆಲೆ ಈ ವರ್ಷ ಮುಖ್ಯಮಂತ್ರಿಗಳು ಬರುತ್ತಿಲ್ಲ. ಮುಂದಿನ ವರ್ಷ ಖಂಡಿತವಾಗಿಯೂ ಬರುತ್ತೇನೆ ಎಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಆಗಮಿಸಲಿದ್ದಾರೆ. ಅದೇ ರೀತಿ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರವಾಸೋಧ್ಯಮ ಸಚಿವ ಹೆಚ್.ಕೆ.ಪಾಟೀಲ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ಹಸ್ತಕ್ಷೇಪ ಆಗಿದೆ... ನನ್ನ ಮೌನ ದೌರ್ಬಲ್ಯವಲ್ಲ: ಸಚಿವ ಸತೀಶ್ ಜಾರಕಿಹೊಳಿ