ಬೆಳಗಾವಿ: ಇಲ್ಲಿನ ಪೀರನವಾಡಿಯ ಯುವಕ ಅರ್ಬಾಜ್ ರಫೀಕ್ ಮುಲ್ಲಾ(22) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪೀರನವಾಡಿ ಗ್ರಾಮದ ಪ್ರಸಾದ ನಾಗೇಶ ವಡ್ಡರ, ಪ್ರಶಾಂತ ಕರ್ಲೇಕರ್ ಬಂಧಿತ ಆರೋಪಿಗಳು. ಇನ್ನು ಕೊಲೆಗೆ ಹಳೆ ದ್ವೇಷವೇ ಕಾರಣ ಎಂದು ತಿಳಿದು ಬಂದಿದೆ.
ಆರೋಪಿಗಳಾದ ಪ್ರಸಾದ ವಡ್ಡರ, ಪ್ರಶಾಂತ ಕರ್ಲೇಕರ್ ಮತ್ತು ಕೊಲೆಯಾದ ಅರ್ಬಾಜ್ ಮುಲ್ಲಾ ಮೂವರು ಸ್ನೇಹಿತರು. ಮೂರು ವರ್ಷಗಳ ಹಿಂದೆ ಪೀರನವಾಡಿಯ ಜನ್ನತ್ ನಗರದಲ್ಲಿ ಅರ್ಬಾಜ್ ವಾಸವಿದ್ದ. ಈ ಮನೆ ಪಕ್ಕ ಒಂದು ಪೆಟ್ಟಿಗೆ ಅಂಗಡಿ ಇತ್ತು. ಆಗ ಪ್ರತಿದಿನದಂತೆ ಅಂಗಡಿಗೆ ಬಂದ ಆರೋಪಿ ಪ್ರಸಾದ್ ಗುಟ್ಕಾ ತಿಂದು ಅರ್ಬಾಜ್ ಮನೆ ಗೋಡೆಗೆ ಉಗುಳಿದ್ದಾನೆ. ಈ ವೇಳೆ, ನೋಡಿಕೊಂಡು ಉಗುಳು ಎಂದು ಪ್ರಸಾದ್ಗೆ ಅರ್ಬಾಜ್ ಹೇಳಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ವಾಗ್ವಾದವಾಗಿದೆ. ಅಲ್ಲದೇ ಅದೇ ಸಂದರ್ಭದಲ್ಲಿ ಅರ್ಬಾಜ್ ಪ್ರಸಾದನಿಗೆ ನಿನ್ನ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನು.
ಅದಾದ ಬಳಿಕ ಮೂರು ವರ್ಷಗಳ ನಂತರ ಅರ್ಬಾಜ್ ಜನ್ನತ್ತ ನಗರದಿಂದ ಹೈದರ್ ಅಲಿ ನಗರಕ್ಕೆ ತನ್ನ ಮನೆ ಶಿಫ್ಟ್ ಮಾಡಿದ್ದನು. ಕಳೆದ ಮೂರು ತಿಂಗಳ ಹಿಂದೆ ಮತ್ತೆ ಮೂವರ ನಡುವೆ ಸ್ನೇಹ ಚಿಗುರೊಡೆದಿದ್ದು, 13ರಂದು ಸಾಯಂಕಾಲ ಅರ್ಬಾಜ್ ಮನೆಗೆ ಆಗಮಿಸಿದ ಇಬ್ಬರು ಆರೋಪಿಗಳು ಬರ್ತಡೇ ಇದೆ ಎಂದು ಬೈಕ್ ಮೇಲೆ ಕರೆದುಕೊಂಡು ಬಂದಿದ್ದಾರೆ. ಜೈನ್ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದ ಆವರಣದಲ್ಲಿ ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ್ದಾರೆ. ಬಳಿಕ ಇಬ್ಬರೂ ಸೇರಿ ಅರ್ಬಾಜ್ನಿಗೆ ಕೈಯಲ್ಲಿ ಹಾಕಿದ್ದ ಖಡ್ಗದಿಂದ ಹಲ್ಲೆ ಮಾಡಿ ಕೊಲೆಗೈದು, ಅಲ್ಲಿಂದ ಪರಾರಿಯಾಗಿದ್ದರು.
ಈ ಕುರಿತು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶೇಖರ್ ಎಚ್.ಟಿ ಮಾತನಾಡಿ, ಘಟನೆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಿಪಿಐ ವಿಜಯಕುಮಾರ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂರು ವರ್ಷಗಳ ಹಿಂದೆ ಕೇವಲ ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದನ್ನು ಪ್ರಶ್ನಿಸಿ, ಆರೋಪಿಗಳಿಗೆ ಜೀವ ಬೆದರಿಕೆ ಹಾಕಿದ್ದೆ ಅರ್ಬಾಜ್ ಕೊಲೆಗೆ ಕಾರಣ ಎಂಬ ಸಂಗತಿ ವಿಚಾರಣೆ ವೇಳೆ ತಿಳಿದು ಬಂದಿದೆ. ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದರು.
ಇದನ್ನೂ ಓದಿ:ಆಸ್ತಿ ವಿವಾದ: ಕೊಡಗಿನಲ್ಲಿ ಸಹೋದರರಿಂದಲೇ ಅಣ್ಣನ ಭೀಕರ ಹತ್ಯೆ
ರೌಡಿಶೀಟರ್ ಹತ್ಯೆ ಮಾಡಿದ ಐವರು ಆರೋಪಿಗಳ ಬಂಧನ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ, ಕಳೆದ ನಾಲ್ಕು ದಿನಗಳ ಹಿಂದೆ ಮಡಿವಾಳದ ರೌಡಿಶೀಟರ್ ಕಪಿಲ್ ಎಂಬವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಹೀಗೆ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನ ಬೆಂಗಳೂರಿನ ದೇವರಜೀವನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಮಂಗಳವಾರ ರಾತ್ರಿ ಡಿ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ನನ್ನು ಎರಡು ಸ್ಕೂಟರ್ನಲ್ಲಿ ಹಿಂಬಲಿಸಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.