ಬೆಳಗಾವಿ: ಜಿಲ್ಲೆಯಲ್ಲಿ ಅನೈತಿಕ ಸಂಬಂಧ ಶಂಕೆಯಿಂದ ಪತಿ-ಪತ್ನಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಗ ಮತ್ತೊಂದು ಅಂತಹದೇ ಪ್ರಕರಣ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಸಂಭವಿಸಿದೆ. ಜೋಡಿ ಕೊಲೆಯಿಂದ ಎರಡೂ ಮನೆಯ ಮಕ್ಕಳು ಅನಾಥ ಆಗುವಂತಾಗಿದೆ.
ಅಕ್ಕತಂಗೇರಹಾಳ ಗ್ರಾಮದಲ್ಲಿ ಮಂಗಳವಾರ ನಡೆದ ಈ ಡಬಲ್ ಮರ್ಡರ್ ಕಂಡು ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ. ಕೊಲೆಯಾದವರು ರೇಣುಕಾ ಮಾಳಗಿ(42), ಮಲ್ಲಿಕಾರ್ಜುನ ಜಗದಾರ್(40). ಕೊಲೆ ಮಾಡಿದ್ದು, ರೇಣುಕಾ ಪತಿ ಯಲ್ಲಪ್ಪ ಮಾಳಗಿ. ತನ್ನ ಪತ್ನಿ ಮಲ್ಲಿಕಾರ್ಜುನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಎರಡು ದಿನಗಳ ಹಿಂದೆಯಷ್ಟೇ ಕಾಡಲು ಆರಂಭಿಸಿದೆ. ಇದರಿಂದ ಆಕ್ರೋಶಗೊಂಡಿದ್ದ ಯಲ್ಲಪ್ಪ ಗೋಕಾಕ ನಗರಕ್ಕೆ ಹೋಗಿ ಒಂದು ಕುಡಗೋಲು ಖರೀದಿಸಿ ಅದಕ್ಕೆ ಸಾಣಿಯನ್ನೂ ಹಿಡಿಸಿದ್ದ. ಬಳಿಕ ಕಂಠಪೂರ್ತಿ ಸಾರಾಯಿ ಕುಡಿದು ಊರಿಗೆ ಬಂದಿದ್ದ. ಇದೇ ವೇಳೆ ಮನೆ ಮುಂದೆ ಸ್ನಾನ ಮಾಡುತ್ತಿದ್ದ ಮಲ್ಲಿಕಾರ್ಜುನನ ನೋಡಿ ಮತ್ತಷ್ಟು ಕುಪಿತನಾಗಿದ್ದ. ಮಲ್ಲಿಕಾರ್ಜುನ ಮುಖಕ್ಕೆ ಸೋಪ್ ಹಾಕುವವರೆಗೆ ಕಾದು ನಿಂತು, ಮುಖಕ್ಕೆ ಸೋಪ ಹಾಕುತ್ತಿದ್ದಂತೆ ಆತನ ಕುತ್ತಿಗೆ ಭಾಗಕ್ಕೆ ಕುಡಗೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಅದೇ ಸಿಟ್ಟಿನಲ್ಲಿ ಮನೆಗೆ ಬಂದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಎರಡೂ ಮನೆಯಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡು ಗ್ರಾಮಸ್ಥರು ಮಮ್ಮಲ ಮರಗುತ್ತಿರುವುದು ಕಂಡುಬಂತು.
ಕೊಲೆಯಾದ ಮಲ್ಲಿಕಾರ್ಜುನ ಪತ್ನಿ ಮಾಲಾ ಮಾತನಾಡಿ, ನನ್ನ ಗಂಡ ಒಳ್ಳೆಯವ, ಅವರ ಮನೆಯಲ್ಲಿನ ಜಗಳ ಏನಿತ್ತೋ..? ನನ್ನ ಗಂಡ ನಮ್ಮ ಮನೆಯಲ್ಲಿ ಚಲೋ ಇದ್ದ. ಮೋಸ ಮಾಡಿ ನನ್ನ ಗಂಡನ ಕೊಲೆ ಮಾಡಿ ಹೋದ. ಈಗ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ನಾನು ಎಲ್ಲಿಗೆ ಹೋಗಲಿ ಎಂದು ಕಣ್ಣೀರು ಹಾಕಿದರು. ಮಲ್ಲಿಕಾರ್ಜುನನ ತಾಯಿ ಮಾತನಾಡಿ, ನಮ್ದು ಊರಾಗ ಯಾರ ಜೊತೆನೂ ಜಗಳ ಇರಲಿಲ್ಲ. ನಮ್ಮ ದೇವಸ್ಥಾನ ಪೂಜಾರಿಯಾಗಿ ಊರ ಮಂದಿಗೆಲ್ಲಾ ಬೇಕಾದವ ಆಗಿದ್ದ. ನನ್ನ ಮಗನಿಗೆ ಮೋಸ ಮಾಡಿ ಕೊಲೆ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಂಕಲಗಿ ಪೊಲೀಸರು ಪರಿಶೀಲನೆ ನಡೆಸಿ ಶವಗಳನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿ ತನಿಖೆ ಆರಂಭಿಸಿದ್ದಾರೆ. ಇತ್ತ ಆರೋಪಿಯನ್ನ ವಿಚಾರಿಸಿದಾಗ ಮಲ್ಲಿಕಾರ್ಜುನ ಮತ್ತು ತನ್ನ ಹೆಂಡತಿ ನಡುವೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಕೊಲೆ ಮಾಡಿದ್ದೇನೆ ಅಂತಾ ತಪ್ಪೊಪ್ಪಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, ಆರೋಪಿಯನ್ನು ಬಂಧಿಸಿದ್ದೇವೆ, ಕೃತ್ಯಕ್ಕೆ ಬಳಸಿದ ಕುಡಗೋಲನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ. ಇನ್ನು ಕೊಲೆಯಾದ ಮಲ್ಲಿಕಾರ್ಜುನ ಜಗದಾರ್ ಪತ್ನಿ ದೂರು ನೀಡಿದ್ದು, ಆರೋಪಿ ಸಂಶಯ ಪಟ್ಟು ಈ ರೀತಿ ಕೊಲೆ ಮಾಡಿದ್ದಾನೆ ಎಂದಿದ್ದಾರೆ. ಕೊಲೆಯಾದ ಮಲ್ಲಿಕಾರ್ಜುನ ಕೃಷಿ ಕೆಲಸ ಮತ್ತು ದೇವಸ್ಥಾನದಲ್ಲಿ ಪೂಜಾರಿಯಾಗಿಯೂ ಕೆಲಸ ಮಾಡುತ್ತಿದ್ದರು. ಇನ್ನು ಆರೋಪಿ ಯಲ್ಲಪ್ಪ ಕೂಡ ಕೃಷಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಅತ್ತ ಕೊಲೆಯಾದವನ ನಾಲ್ಕು ಮಕ್ಕಳು ಅನಾಥವಾಗಿದ್ದರೆ, ಇತ್ತ ಕೊಲೆಯಾದ ತಾಯಿ ಮತ್ತು ಕೊಲೆ ಮಾಡಿದ ತಂದೆಯ ಇಬ್ಬರು ಮಕ್ಕಳು ಅನಾಥರಾಗಿ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: Bengaluru Crime: ಮೊಬೈಲ್ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಗೆ ಚಾಕು ಇರಿದ ಪತಿ