ಬೆಳಗಾವಿ: ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ನಗರದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ಗೋಮಾತೆಯ ರಕ್ಷಣೆಯ ಜತೆಗೆ ಹೈನೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ. ಹೀಗಾಗಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದರು.
ಕೆಎಂಎಫ್ ಗೆ ನಾವೇ ಹಾಲು ಕೊಡಬೇಕು. ಗೋಮಾತಾ ನಮ್ಮ ತಾಯಿ ಇದ್ದ ಹಾಗೆ. ಅಧ್ಯಕ್ಷರೇ, ಕೆಎಂಎಫ್‌ಗೆ 1 ಕೋಟಿ ಲೀಟರ್ ಹಾಲನ್ನು ನಮ್ಮ ರೈತರ ಮೂಲಕ ಪೂರೈಸುತ್ತೇವೆ. ಇಲಾಖೆ ಅಭಿವೃದ್ಧಿಗೆ ಸಿಎಂ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಗೋರಕ್ಷಣೆಗೆ ಆ್ಯಂಬುಲೆನ್ಸ್ ಕೊಟ್ಟಿದ್ದೇವೆ. ಈ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ನಮ್ಮದು ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಅಮುಲ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೆ.ಎಂ.ಎಫ್ ಬೆಳವಣಿಗೆಗೊಳಿಸುವಲ್ಲಿ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಕೂಡ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಸಾಲ, ತರಬೇತಿ, ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.