ಅಥಣಿ: ಕೊರೊನಾ ಸೋಂಕು ಹಿನ್ನೆಲೆ ಸರ್ಕಾರ ಕೋವಿಡ್ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದೆ. ಆದರೆ, ಜನ ಸಾಮಾನ್ಯರಿಗೆ ಒಂದು ನ್ಯಾಯ ತಾಲೂಕು ಆಡಳಿತಕ್ಕೆ ಒಂದು ನ್ಯಾಯ ಅನ್ನುವ ರೀತಿಯಲ್ಲಿ ಕೊವಿಡ್ -19 ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮುಂಬರುವ ರಾಜ್ಯೋತ್ಸವ ಆಚರಣೆ ನಿಮಿತ್ತ ಕನ್ನಡ ಸಂಘಟನೆಗಳ ಸಭೆ ಕರೆಯಲಾಗಿತ್ತು. ಆದರೆ, ಪಟ್ಟಣದಲ್ಲಿ ವ್ಯಾಪಕವಾಗಿ ಕೊರೊನಾ ಮಹಾಮಾರಿ ಹಬ್ಬುತ್ತಿದ್ದರೂ ಅಥಣಿ ತಾಲೂಕು ಆಡಳಿತ ಮಾತ್ರ ನಮಗೂ ಕೊರೊನಾ ವೈರಸ್ಗೂ ಸಂಬಂಧ ಇಲ್ಲ ಎನ್ನುವ ವರ್ತನೆ ನೋಡಿ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಹಿನ್ನೆಲೆ ನೂರಕ್ಕೂ ಹೆಚ್ಚು ಜನ ಸಭೆ - ಸಮಾರಂಭ ಮಾಡಬಾರದು ಎಂದು ಸರ್ಕಾರ ಸ್ಪಷ್ಟ ನಿಯಮಗಳು ಇದ್ದರೂ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೇರಿಸಿ ಸಭೆ ನಡೆಸುತ್ತಿದ್ದಾರೆ. ಯಾವುದೇ ಸಾಮಾಜಿಕ ಅಂತರ ಇಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಕೂಡ ಮಾಡಿಲ್ಲ. ಅಧಿಕಾರಿಗಳು ಕೂಡಾ ಸಾಮಾಜಿಕ ಅಂತರ ಮರೆತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ್ ಶಿಂಗೆ ಆಕ್ರೋಶ ವ್ಯಕ್ತಪಡಿಸಿದರು.