ಬೆಳಗಾವಿ: ಕನ್ನಡ ರಾಜ್ಯೋತ್ಸವಕ್ಕೂ ಮಹಾಮಾರಿ ಕೊರೊನಾ ವೈರಸ್ ಕಂಟಕವಾಗಿ ಪರಿಣಮಿಸಿದ್ದು, ಕನ್ನಡ ರಾಜ್ಯೋತ್ಸವಕ್ಕೆಂದೇ ತಯಾರಿಸಲಾಗಿದ್ದ ಬಾವುಟಗಳು, ಶಲ್ಯಗಳನ್ನು ಕೊಳ್ಳುವವರಿಲ್ಲದೆ ವ್ಯಾಪಾರಿಗಳು ಸಂಕಟ ಅನುಭವಿಸುತ್ತಿದ್ದಾರೆ.
ಕೋವಿಡ್ ಹಿನ್ನಲೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ವಯ ಕನ್ನಡ ರಾಜ್ಯೋತ್ಸವದ ವಿಜೃಂಭಣೆ ಆಚರಣೆಗೆ ಬ್ರೇಕ್ ಬಿದ್ದಿದೆ. ಪರಿಣಾಮ, ಕನ್ನಡ ರಾಜ್ಯೋತ್ಸವದ ಬಾವುಟ, ವಸ್ತ್ರಗಳು, ಟೋಪಿ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ತೀವ್ರ ಪರಿಣಾಮ ಬೀರಿದೆ. ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ಸರಳ ರಾಜ್ಯೋತ್ಸವ ಆಚರಣೆಗೆ ಮುಂದಾಗಿರುವ ಪರಿಣಾಮ ಕನ್ನಡ ಬಾವುಟಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಸಾಕಷ್ಟು ಬಂಡವಾಳ ಹಾಕಿ ತಯಾರಿಸಿದ ಬಾವುಟಗಳನ್ನು ಕೊಂಡುಕೊಳ್ಳುವವರಿಲ್ಲದೆ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ.
ಕನ್ನಡ ರಾಜ್ಯೋತ್ಸವವನ್ನು ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ವಿಜೃಂಭಣೆಯಿಂದ ಮಾಡುವ ಜಿಲ್ಲೆಯೆಂದರೆ ಅದು ಕುಂದಾನಗರಿ ಬೆಳಗಾವಿಯಲ್ಲಿ ಮಾತ್ರ. ಪ್ರತಿ ವರ್ಷ ಮೂರು ಲಕ್ಷಕ್ಕೂ ಅಧಿಕ ಜನರು ವಾದ್ಯಮೇಳಗಳೊಂದಿಗೆ ಕನ್ನಡಾಂಬೆ ಭುವನೇಶ್ವರಿಯ ಭವ್ಯ ಮೆರವಣಿಗೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದ ಪ್ರಮುಖ ರಸ್ತೆ ಮೂಲಕ ಸಂಚರಿಸಿ ವೀರರಾಣಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುತ್ತಾರೆ. ಆದ್ರೆ, ಈ ಬಾರಿ ಜಿಲ್ಲಾಡಳಿತ ಮೆರವಣಿಗೆ ನಿರ್ಬಂಧ ವಿಧಿಸಿದ್ದು ಸರಳ ಆಚರಣೆಗೆ ಮುಂದಾಗಿದೆ.
ನಾವು ಲಾಭಕ್ಕಾಗಿ ಕನ್ನಡ ಬಾವುಟಗಳನ್ನು ಮಾರಾಟ ಮಾಡುತ್ತಿಲ್ಲ. ಕನ್ನಡದ ಅಭಿಮಾನಕ್ಕಾಗಿ, ಕನ್ನಡ ಬೆಳವಣಿಗೆ ಮತ್ತು ಉಳಿವು, ಪ್ರತಿಯೊಬ್ಬರ ಮನೆಯ ಛಾವಣಿ ಮೇಲೆ ಕನ್ನಡ ಬಾವುಟಗಳು ಹಾರಾಡಬೇಕೆಂಬ ಸದುದ್ದೇಶದಿಂದ ಬಾವುಗಳನ್ನು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಕೆಲವು ಮಾರಾಟಗಾರರು.