ಬೆಳಗಾವಿ: ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ, ಬಾಳೆಕುಂದ್ರಿ ಕೆ.ಹೆಚ್. ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಿದ್ದಲ್ಲದೆ, ಅವರ ಸದಸ್ಯತ್ವ ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಾಳೆಕುಂದ್ರಿ ಗ್ರಾಪಂ ಅಧ್ಯಕ್ಷ ಪ್ರಶಾಂತ ಜಾಧವ್ ಮೇಲೆ 26,78,473 ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಇದೆ. ಹೀಗಾಗಿ ಅವರ ಸದಸ್ಯತ್ವವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಪ್ರಾದಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂನಂ ಘಾಟಡೆ ಅವರನ್ನು ಅಮಾನತು ಮಾಡಿ ಇಲಾಖೆ ತನಿಖೆ ಬಾಕಿ ಇರಿಸಲಾಗಿದೆ.
ಏನಿದು ಪ್ರಕರಣ?:
ಪ್ರಶಾಂತ ಜಾಧವ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿಕೊಂಡು 14ನೇ ಹಣಕಾಸು ಯೋಜನೆ ಅಡಿ 7,37,042 ರೂಪಾಯಿ ಖರ್ಚು ಮಾಡಿದ್ದಾರೆ ಹಾಗೂ ಇದರೊಂದಿಗೆ 5,37,000 ರೂಪಾಯಿ ಮೊತ್ತಕ್ಕೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ. 2018-19ನೇ ಸಾಲಿಗೆ ಸಂಬಂಧಿಸಿದಂತೆ ಎಸ್ಕ್ರೋ ಖಾತೆಯಲ್ಲಿನ 13,17,650 ರೂಪಾಯಿಗಳನ್ನು ಕೆಟಿಪಿಪಿ ಕಾಯ್ದೆಯನುಸಾರ ಬಳಸಿಲ್ಲ. ಕರವಸೂಲಾತಿಯಲ್ಲಿ 86,781 ರೂಪಾಯಿಗಳನ್ನು ಸರ್ಕಾರಿ ಖಾತೆಗೆ ಭರಿಸದೆ ಸ್ವಂತ ಉಪಯೋಗಕ್ಕಾಗಿ ಬಳಸಿ ಒಟ್ಟು 26,78,473 ರೂಪಾಯಿ ಮೊತ್ತದ ಗ್ರಾಮ ಪಂಚಾಯಿತಿಯ ಅನುದಾನವನ್ನು ದುರಪಯೋಗಪಡಿಸಿಕೊಂಡಿರುವ ಬಗ್ಗೆ ಜಿಪಂ ಸಿಇಒ ಆರೋಪ ಮಾಡಿದ್ದರು.
ಆರೋಪಗಳು ಬಲವಾಗಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಇರುವುದನ್ನು ವಿಚರಣೆ ವೇಳೆ ಪ್ರಾದೇಶಿಕ ಆಯುಕ್ತರು ಗಮನಿಸಿ, ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಪಂ ಸಿಇಒಗೆ ಸೂಚಿಸಿದ್ದರು. ಅದರಂತೆ ಜೂನ್ 19ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಹಾಜರಾಗಲು ತಿಳಿಸಿದ್ದರೂ ಹಾಜರಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಹೀಗಾಗಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದು, ಅವರ ಸದಸ್ಯತ್ವವನ್ನೂ ರದ್ದುಪಡಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.