ಚಿಕ್ಕೋಡಿ/ಬೆಳಗಾವಿ : ಶಾಲಾ-ಕಾಲೇಜು ಆರಂಭ ಆಗುವುದಕ್ಕೂ ಮುನ್ನ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಶಾಲಾ-ಕಾಲೇಜು ಆರಂಭವಾದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ 18 ಶಿಕ್ಷಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ರಾಮದುರ್ಗ ತಾಲೂಕಿನಲ್ಲಿ ಮೂವರು, ಕಿತ್ತೂರು ತಾಲೂಕಿನ ಓರ್ವ ಶಿಕ್ಷಕ, ಬೆಳಗಾವಿ ಮಹಾನಗರದಲ್ಲಿ ನಾಲ್ವರು ಶಿಕ್ಷಕರು ಹಾಗೂ ಬೆಳಗಾವಿ ತಾಲೂಕಿನ 10 ಜನ ಸೇರಿ ಒಟ್ಟು 18 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ ಈವರೆಗೂ 5,150 ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಅದರಲ್ಲಿ ಎರಡು ಸಾವಿರ ಶಿಕ್ಷಕರಿಗೆ ಕೊರೊನಾ ನೆಗೆಟಿವ್ ಬಂದಿದ್ದು, 18 ಶಿಕ್ಷಕರಿಗೆ ಪಾಸಿಟಿವ್ ವರದಿ ಬಂದಿದೆ. ಮೂರು ಸಾವಿರ ಶಿಕ್ಷಕರ ವರದಿಯನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.
ಇತ್ತ ಕಡೋಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ತಾಲೂಕಿನ ಕಡೋಲಿ ಗ್ರಾಮದ ಸರ್ಕಾರಿ ಶಾಲೆಯನ್ನು ಶಿಕ್ಷಣ ಇಲಾಖೆ ಇಂದಿನಿಂದ ಬಂದ್ ಮಾಡಿದೆ. ಕಾರಣ, ಜನವರಿ ಒಂದರ ಮೊದಲು ಕಡೋಲಿ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಕೊರೊನಾ ಪತ್ತೆ ಆಗಿತ್ತು.
ಆದ್ರೆ, ಈ ಕೊರೊನಾ ಸೋಂಕಿತ ಶಿಕ್ಷಕ, ಸಹ ಶಿಕ್ಷಕರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಹೀಗಾಗಿ ಸಹಶಿಕ್ಷಕರ ಕೊರೊನಾ ವರದಿ ಬರುವವರೆಗೂ ಕಡೋಲಿ ಸರ್ಕಾರಿ ಶಾಲೆ ಬಂದ್ ಮಾಡಲಾಗಿದೆ ಎಂದು ಡಿಡಿಪಿಐ ಆನಂದ ಬಿ ಪುಂಡಲೀಕ ಮಾಹಿತಿ ನೀಡಿದ್ದಾರೆ.
ಇನ್ನು, ಚಿಕ್ಕೋಡಿಯಲ್ಲಿ 4 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ನಗರದ ಡಿಡಿಪಿಐ ಗಜಾನನ ಮನ್ನಿಕೇರಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಮೊದಗಾ ಗ್ರಾಮದ ಶಾಲೆಯ ಎರಡು ಜನ ಶಿಕ್ಷಕರಿಗೆ ಹಾಗೂ ರಾಯಬಾಗ ತಾಲೂಕಿನ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ.
ಓದಿ: ಭಾರತದಲ್ಲಿ ಮತ್ತೆ ಹಕ್ಕಿ ಜ್ವರ: ಇದು ಹೇಗೆ ಹರಡುತ್ತದೆ, ಮುಂಜಾಗ್ರತಾ ಕ್ರಮಗಳೇನು?
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಈವರೆಗೆ 10 ಸಾವಿರ ಶಿಕ್ಷಕರ ಕೊರೊನಾ ಟೆಸ್ಟಿಂಗ್ ರಿಸಲ್ಟ್ ಬಂದಿದ್ದು, ಇನ್ನು 5 ಸಾವಿರ ಶಿಕ್ಷಕರ ಕೊರೊನಾ ವರದಿ ಬಾಕಿ ಇದೆ ಎಂದು ಚಿಕ್ಕೋಡಿ ಡಿಡಿಪಿಐ ಮಾಹಿತಿ ನೀಡಿದ್ದಾರೆ.