ಬೆಳಗಾವಿ: ತಾಲೂಕಿನ ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ವಿಪರ್ಯಾಸವೆಂದರೆ ನಿನ್ನೆಯಷ್ಟೇ ಈ ವೈದ್ಯೆ ಸುಮಾರು 20ಕ್ಕೂ ಅಧಿಕ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿದ್ದು, ಇದೀಗ ತಪಾಸಣೆಗೆ ಒಳಗಾಗಿದ್ದ ಅವರೆಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ.
ಈ ಮೊದಲು ವೈದ್ಯೆ ಕೋವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ವೈದ್ಯೆಯ ಒಂದು ವಾರದ ಶಿಫ್ಟ್ ಮುಗಿದ ಹಿನ್ನೆಲೆ ನಾಲ್ಕೈದು ದಿನಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಆರೋಗ್ಯ ಕೇಂದ್ರದಲ್ಲಿ ಈ ವೈದ್ಯೆ ದಿನಕ್ಕೆ ಸುಮಾರು 50ರಿಂದ 60 ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ.
25 ವರ್ಷ ವಯಸ್ಸಿನ ಯುವ ವೈದ್ಯೆಗೆ ಸೋಂಕು ತಗುಲಿದ್ದು, 250ಕ್ಕೂ ಅಧಿಕ ರೋಗಿಗಳಿಗೆ ಸೋಂಕಿತ ವೈದ್ಯೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಇದೀಗ ಜಿಲ್ಲಾಡಳಿತ ಎಲ್ಲಾ ರೋಗಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುತ್ತಿದೆ.