ಅಥಣಿ: ತಾಲೂಕಿನಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ವರ್ತಕರು ವ್ಯಾಪಾರಕ್ಕೆ ಸ್ವಯಂ ಘೋಷಿತ ಸಮಯ ನಿಗದಿ ಪಡಿಸಿದ್ದಾರೆ.
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ವ್ಯಾಪಾರಸ್ಥರು ವ್ಯಾಪಾರ ಸಮಯವನ್ನು ಕಡಿತಗೊಳಿಸಿದ್ದು, ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ.
ವ್ಯಾಪಾರಸ್ಥರ ಮುಖಂಡ ರಾಮನಗೌಡಾ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದು, ಪಟ್ಟಣದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಲು ನಿರ್ಧರಿಸಿದ್ದೇವೆ ಹಾಗೂ ಸಾರ್ವಜನಿಕರಿಗೂ ಸಹ ನಮ್ಮಲ್ಲಿ ವ್ಯಾಪಾರ ಮಾಡಲು ನಿಯಮ ವಿಧಿಸಿದ್ದೇವೆ ಎಂದರು.
ವ್ಯಾಪಾರ- ವಹಿವಾಟಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಇಲ್ಲವಾದಲ್ಲಿ ಖರೀದಿಗೆ ಅವಕಾಶ ನೀಡುವುದಿಲ್ಲ. ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ವ್ಯಾಪಾರ ಮಾಡಲು ನಾವು ನಮ್ಮ ಸಮಯವನ್ನ ನಿಗದಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.