ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ರೈತರು ಈಗ ಬೆಳೆದು ನಿಂತ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆಯನ್ನು ಕುರಿ ಮತ್ತು ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.
ಈ ಬಾರಿಯಾದ್ರೂ ಮೆಣಸಿನಕಾಯಿ ಬೆಳೆಗೆ ಒಳ್ಳೆ ಬೆಲೆ ಸಿಗಬಹುದು ಎಂದು ಖಾನಾಪುರ ತಾಲೂಕಿನ ಪೂರ್ವಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಹಸಿ ಮೆಣಸಿನಕಾಯಿ ಬೆಳೆದಿದ್ದರು. ಆದರೆ ಕೊರೊನಾ ಎಫೆಕ್ಟ್ ನಿಂದ ದೇಶಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರ ಪರಿಣಾಮ ಬೆಳೆಗೆ ಬೆಲೆ ಇಲ್ಲದಂತಾಗಿದೆ.
ಮೆಣಸಿನಕಾಯಿ ತುಂಬಲು ಬೇಕಾಗುವ ಖಾಲಿ ಚೀಲವೊಂದಕ್ಕೆ ರೈತರು 30ರೂಪಾಯಿ ಕೊಡಬೇಕು. ಆದರೆ, ಅದರಲ್ಲಿ ತುಂಬಿದ ಮೆಣಸಿನಕಾಯಿಯನ್ನು ಮಧ್ಯವರ್ತಿಗಳು 1 ರೂ. ಇಲ್ಲವೇ 2 ರೂ. ಗೆ ಕೆಜಿಯಂತೆ ಪಡೆಯುತ್ತಿದ್ದಾರೆ. ಆದರೆ, ಅದೆ ಮೆಣಸಿನಕಾಯಿಯನ್ನು ಗ್ರಾಹಕರಿಗೆ ಕೊಡಬೇಕಾದರೆ ಕೆಜಿಗೆ 30 ರಿಂದ 40 ರೂಪಾಯಿ ನೀಡುತ್ತಾರೆ. ರೈತರೇ ನೇರವಾಗಿ ಮಾರುಕಟ್ಟೆಗೂ ಹೋಗಲು ಆಗುತ್ತಿಲ್ಲ.
ಇದರಿಂದ ಬೇಸತ್ತ ರೈತರು ಕುರಿ ಮತ್ತು ದನಗಳನ್ನೆ ಮೇಯಿಸುತ್ತಿದ್ದಾರೆ. ಇನ್ನು ಕೆಲ ರೈತರು ಹಾಗೆಯೇ ಗದ್ದೆಯಲ್ಲಿ ಕೊಳೆತು ಹೋಗುವಂತೆ ಬಿಟ್ಟು ಬಿಟ್ಟಿದ್ದಾರೆ.
ಖಾನಾಪುರ ತಾಲೂಕಿನ ಪೂರ್ವಭಾಗದ ಅವರೊಳ್ಳಿ, ಬಿಳಕಿ, ಕೊಡಚವಾಡ, ಚಿಕ್ಕದಿನಕೊಪ್ಪ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಪಾರಿಶ್ವಾಡ, ದೇಮಿನಕೊಪ್ಪ, ಇಟಗಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮದ ರೈತರು ಈಗ ಮೆಣಸಿನಕಾಯಿ ಬೆಳೆಯ ನಷ್ಟದಿಂದ ರೋಸಿ ಹೋಗಿದ್ದಾರೆ.