ಚಿಕ್ಕೋಡಿ (ಬೆಳಗಾವಿ): ಮಹಾಮಾರಿ ಕೊರೊನಾದಿಂದ ಇಡೀ ದೇಶದ ಜನರ ಜನಜೀವನ ಸಂಕಷ್ಟಕ್ಕೆ ದೂಡಿದಂತಾಗಿದೆ. ಇಲ್ಲಿನ ಅಲೆಮಾರಿ ಜನರ ಜೀವನ ಹಾಗೂ ಊಟ ಸಿಗದೇ ತೀವ್ರ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ.
ಇಲ್ಲಿನ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸಿದ್ದರಾಯನ ಮಡ್ಡಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಅಲೆಮಾರಿ ಜನರು ತಮ್ಮ ಪುಟ್ಟ ಜೋಪಡಿಗಳಲ್ಲಿ ವಾಸವಾಗಿದ್ದಾರೆ. ಆದರೆ ಕಳೆದ ಹತ್ತು ದಿನಗಳಿಂದ ಈ ಜನರು ಕಣ್ಣೀರಿನಲ್ಲಿ ಕೈತೊಳೆಯುತಿದ್ದಾರೆ. ಒಪ್ಪತ್ತಿನ ಗಂಜಿಗಾಗಿ ವೃದ್ಧರು, ಮಹಿಳೆಯರು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಗೋಗರಿಯುತಿದ್ದಾರೆ.
ಬೆಳಗಾದರೆ ಸಾಕು ತಾವು ಮಾಡಬೇಕಿದ್ದ ಕಾಯಕ ನಿಂತು ಹೋಗಿದೆ. ಒಂದೆಡೆ ಕೊರೊನಾ ಭೀತಿ, ಮತ್ತೊಂದೆಡೆ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಚಿಂತೆ. ಹೀಗೆ ಈ ಕುಟುಂಬಗಳು ಹಗಲು, ರಾತ್ರಿಯಿಡೀ ಆತಂಕ ಮತ್ತು ಚಿಂತೆಯಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಟುಂಬದ ಯಜಮಾನನಿಗೆ ತಮ್ಮ ಮನೆ ಮಂದಿ ಮಕ್ಕಳ ಹೊಟ್ಟೆಯನ್ನು ಹೇಗೆ ತುಂಬಿಸಬೇಕೆಂಬುದೇ ಒಂದು ದೊಡ್ಡ ಚಿಂತೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಈ ಅಲೆಮಾರಿ ಕುಟುಂಬಗಳ ಬಗ್ಗೆ ಕಾಳಜಿವಹಿಸದೇ ಇರುವುದು ದುರ್ದೈವದ ಸಂಗತಿ.