ಬೆಳಗಾವಿ : ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ. ಆದ್ರೆ ಆತನಿಗೆ ದೃಢಪಟ್ಟಿರುವ ಕೋವಿಡ್ ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೊರೊನಾ ಪಾಸಿಟಿವ್ ಬಂದ ತಕ್ಷಣ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದರು.
ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆಮಾತನಾಡಿ, ಸದ್ಯ ನಮ್ಮ ದೇಶದಲ್ಲಿ ಆತಂಕ ಪಡುವಂತ ಸ್ಥಿತಿ ಬಂದಿಲ್ಲಾ. ಚೀನಾಗೆ ಹೋಲಿಕೆ ಮಾಡೋದು ಬೇಡ. ಯಾರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ತಗೆದುಕೊಂಡರೆ ಸಾಕು. ನಮ್ಮ ವ್ಯಾಕ್ಸಿನೇಷನ್ ಚನ್ನಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಅಂತಾ ತಿಳಿಸಿದರು.
ನಮ್ಮ ದೇಶದಲ್ಲಿ ಎರಡುಪಟ್ಟು ನಾವು ಚನ್ನಾಗಿದೇವೆ. ಸ್ವಾಭಾವಿಕವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇದೆ. ಇವತ್ತು ಕಂದಾಯ ಸಚಿವರ ಜೊತೆ ಸಭೆ ನಡೆಸಿ ಯಾವ ರೀತಿ ಮಾರ್ಗಸೂಚಿ ಕೊಡಬೇಕು ಮತ್ತು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಪ್ರತಿಕ್ರಿಯಿಸಿದರು.
ತಜ್ಞರ ಜೊತೆ ಸಭೆಯ ಬಳಿಕ ಮಾರ್ಗಸೂಚಿ ಹೊರಡಿಸುವಂತ ಸಲಹೆ ಬಂದ್ರೆ ಸಿಎಂ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಹೊರಡಿಸುತ್ತೇವೆ. ಚೀನಾದಿಂದ ಬಂದ ವ್ಯಕ್ತಿಗೆ ಕೊರೊನಾ ಪಾಸಿಟಿಟ್ ಬಂದಿದೆ. ಆದ್ರೆ ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಜೀನೋಮಿಕ್ ಸ್ವೀಕ್ವೆನ್ಸ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ್ದ 40 ವರ್ಷದ ವ್ಯಕ್ತಿ ಮೊದಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಿಗೆ ಶನಿವಾರ ಕೋವಿಡ್ -19 ಪಾಸಿಟಿವ್ ವರದಿಯಾಗಿತ್ತು. ನಂತರ ಅವರನ್ನು ಆಗ್ರಾದ ಅವರ ಮನೆಯಲ್ಲಿ ಐಸೋಲೇಷನ್ ಮಾಡಲಾಗಿದೆ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ್ ಹೇಳಿದ್ದಾರೆ.
ಆ ವ್ಯಕ್ತಿ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಮಾಡಿಸಲು ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಪಾಸಿಟಿವ್ ವರದಿಯಾದ ವ್ಯಕ್ತಿಯ ಮನೆಯನ್ನು ಸೀಲ್ ಮಾಡಿರುವ ಅಧಿಕಾರಿಗಳು ವ್ಯಕ್ತಿಯನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿ ಐಸೋಲೇಷನ್ನಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಅವರ ಕುಟುಂಬ ಸದಸ್ಯರು ಹಾಗೂ ಅವರ ಸಂಪರ್ಕಕ್ಕೆ ಬಂದವರೆಲ್ಲರಿಗೂ ಮಾದರಿ ಕಲೆಹಾಕಿ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದು ಶ್ರೀವಾಸ್ತವ್ ತಿಳಿಸಿದರು.
ಈ ವ್ಯಕ್ತಿ ಡಿಸೆಂಬರ್ 23 ರಂದು ಚೀನಾದಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ದೆಹಲಿಗೆ ತೆರಳಿ ಆಗ್ರಾಕ್ಕೆ ಹಿಂದಿರುಗಿದ್ದರು. ಚೀನಾದಿಂದ ಆಗ್ರಾಕ್ಕೆ ಬಂದ ಅವರನ್ನು ಅನಾರೋಗ್ಯ ಪೀಡಿತರಾಗಿದ್ದ ಕಾರಣ ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಯಿತು. ಭಾನುವಾರ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ನವೆಂಬರ್ 25ರ ನಂತರ ಆಗ್ರಾ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ನೆರೆಯ ದೇಶ ಚೀನಾದಲ್ಲಿ ಕೋವಿಡ್ ಅಲೆ ಮತ್ತೆ ಎದ್ದಿದ್ದು, ಚೀನಾದ ಕೋವಿಡ್ನ BF.7 ರೂಪಾಂತರಿ ವೈರಸ್ನ ಆತಂಕ ಹೆಚ್ಚಾಗಿದ್ದು, ಭಾರತದಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈಗಾಗಲೇ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿ, ಅಂತಾರಾಷ್ಟ್ರೀಯ ಪ್ರಯಾಣಿಕರು ಅದರಲ್ಲೂ ಚೀನಾದಿಂದ ಹಿಂದಿರುಗುತ್ತಿರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಟ್ಟಿದೆ.
ಈಗಾಗಲೇ ಪಾಸಿಟಿವ್ ವರದಿಯಾಗಿರುವ ಎರಡು ಪ್ರಕರಣಗಳ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸುವ ಕೆಲಗಳನ್ನು ಜಿಲ್ಲಾಡಳಿತ ಮಾಡುತ್ತಿದೆ. ಅದಷ್ಟೇ ಅಲ್ಲದೆ ವಿದೇಶದಿಂದ ಬರುವ ಪ್ರಯಾಣಿಕರನ್ನು ಐಸೋಲೇಷನ್ನಲ್ಲಿ ಇರಿಸಿ ಅವರ ಮೇಲೆ 7 ದಿನಗಳ ಕಾಲ ನಿಗಾ ಇಡಲಾಗುತ್ತಿದೆ. ಯಾರಲ್ಲಾದರೂ ಶೀತ, ಜ್ವರದಂತಹ ಕೊರೊನಾ ಲಕ್ಷಣಗಳು ಕಂಡುಬಂದರೆ ಅವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗೆ ಕೋವಿಡ್ ವಿರುದ್ಧ ಕೇಂದ್ರ ಸರ್ಕಾರ ನಿಗಾ ಕ್ರಮಗಳನ್ನು ಹೆಚ್ಚಿಸಿದೆ.
ಓದಿ: ಚೀನಾದಿಂದ ಬಂದ ಆಗ್ರಾದ ನಂತರ ಇದೀಗ ಉನ್ನಾವೋದ ಯುವಕನಿಗೆ ಕೋವಿಡ್ ಪಾಸಿಟಿವ್