ಬೆಳಗಾವಿ: ಕೃಷಿಯ ದೈನಂದಿನ ಚಟುವಟಿಕೆಗಳು ಸ್ಥಗಿತಗೊಳ್ಳದಂತೆ ಹಾಗೂ ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ-ಗೊಬ್ಬರ ಪೂರೈಕೆಗೆ ವ್ಯತ್ಯಯವಾಗದಂತೆ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಾದರೆ ರೈತರಿಗೆ ಬೀಜ, ಗೊಬ್ಬರ ಮತ್ತಿತರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಲಾಕ್ಡೌನ್ ಹಿನ್ನೆಲೆ ರೈತರು ಬೆಳೆದ ತರಕಾರಿ, ಹಣ್ಣುಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದರು.
ಅಲ್ಲದೇ ಬಿತ್ತನೆ ಬೀಜ-ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ, ಸಾಗಾಣಿಕೆ ಸಮರ್ಪಕವಾಗಿ ಇರಬೇಕು. ಕೃಷಿ ಯಂತ್ರೋಪಕರಣಗಳು ಮತ್ತಿತರ ಸಾಮಾಗ್ರಿಗಳ ಮಾರಾಟ ವ್ಯವಸ್ಥೆಯನ್ನು ಯಥಾಪ್ರಕಾರ ಕಲ್ಪಿಸಬೇಕು. ಸರಕು ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧಗಳಿಲ್ಲ. ಒಂದು ವೇಳೆ ಎಲ್ಲಿಯಾದರೂ ಸರಕು ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳಿಗೆ ತಡೆಯೊಡ್ಡಿದರೆ ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಲಾಗುವುದು ಎಂದರು.
ರಾಜ್ಯದಲ್ಲಿ ಕೋಳಿ ಅಥವಾ ಹಕ್ಕಿಜ್ವರ ವರದಿಯಾಗಿಲ್ಲ. ಕೋಳಿ ಮಾಂಸ ತಿಂದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ವಿಧಾನ ಪರಿಷತ್ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ನೆರೆಯ ರಾಜ್ಯಗಳಿಗೆ ಪೂರೈಕೆಯಾಗುವ ಹಣ್ಣು-ತರಕಾರಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸರಾಗವಾಗಿ ಸಾಗಿಸಲು ಆಯಾ ರಾಜ್ಯದ ಗಡಿಯ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಈ ವೇಳೆ ಶಾಸಕ ಸತೀಶ್ ಜಾರಕಿಹೊಳಿ, ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಉಪಸ್ಥಿತರಿದ್ದರು.