ಬೆಳಗಾವಿ: ಪೂರ್ಣಗೊಂಡ ರಸ್ತೆ ಕಾಮಗಾರಿಗಳ ಬಿಲ್ ಕೊಡಿಸುವಂತೆ ಬೆಳಗಾವಿ ಮೂಲದ ಗುತ್ತಿಗೆದಾರನೋರ್ವ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಪ್ರಧಾನಿಗೆ ಪತ್ರ ಬರೆದವರು ಎಂದು ತಿಳಿದುಬಂದಿದೆ.
![contractor-wrote-letter-to-prime-minister-for-bill-payment](https://etvbharatimages.akamaized.net/etvbharat/prod-images/14863303_thum.jpg)
ಸಂತೋಷ ಪಾಟೀಲ ಅವರು ಕಳೆದ ಫೆಬ್ರವರಿ 2021ರಂದು ಸಚಿವರ ಅನುಮತಿ ಪಡೆದುಕೊಂಡು ಸಣ್ಣ ಸಣ್ಣ 108 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರು. ಆದ್ರೆ, ಒಂದು ವರ್ಷ ಕಳೆದರೂ ಕೂಡ ಸರ್ಕಾರದ ಅಧಿಕಾರಿಗಳು ಹಣ ನೀಡ್ತಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಸಾಲ ಸೋಲ ಮಾಡಿ ನಾಲ್ಕು ಕೋಟಿ ವೆಚ್ಚದಲ್ಲಿ 108 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ.
![road construction](https://etvbharatimages.akamaized.net/etvbharat/prod-images/kn-bgm-04-28-pradanige-patra-ka10029_28032022205159_2803f_1648480919_915.jpg)
ಈಗ ಸಾಲ ಕಟ್ಟಲು ಆಗ್ತಿಲ್ಲ. ಇತ್ತ ಇಲಾಖೆಯಿಂದ ಕಾಮಗಾರಿ ಹಣ ಕೂಡ ಬಿಡುಗಡೆ ಆಗ್ತಿಲ್ಲ. ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ಹೀಗಾಗಿ, ಕಳೆದ ಹಲವು ದಿನಗಳ ಹಿಂದೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿ. ಎಲ್ ಸಂತೋಷ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳನ್ನ ಭೇಟಿ ಮಾಡಿ ಪ್ರಕರಣವನ್ನ ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರ ಜೊತೆಗೆ ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ಸಾಕಷ್ಟು ಸಾಲ ಆಗಿದ್ದರಿಂದ ಜೀವನ ನಡೆಸೋದು ಕಷ್ಟವಾಗ್ತಿದೆ. ಹೀಗಾಗಿ, ಆದಷ್ಟು ಬೇಗ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಹಣ ಕೊಡಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುತ್ತಿಗೆದಾರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ, 'ಈಟಿವಿ ಭಾರತ'ದೊಂದಿಗೆ ಫಫನ್‌ನಲ್ಲಿ ಮಾತನಾಡಿದ ಸಂತೋಷ ಪಾಟೀಲ್, ಅನುದಾನ ಬಿಡುಗಡೆ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನ ಸಾಕಷ್ಟು ಬಾರಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಆದ್ರೆ, ಅವರು ಕೊಡುತ್ತೇನೆ ಕೊಡುತ್ತೇನೆ ಅಂತಾ ಹೇಳಿ ಒಂದು ವರ್ಷ ಕಳೆದರು. ಹೀಗಾಗಿ, ನಾನು ಪ್ರಧಾನಿಗೆ ಪತ್ರವನ್ನು ಬರೆದಿದ್ದೇನೆ. ಇದರ ಜೊತೆಗೆ ಸಚಿವ ತಮ್ಮ ಸಹವರ್ತಿಗಳಿಂದ ಕಮಿಷನ್ ಬೇಡುತ್ತಿದ್ದಾರೆ. ಹೀಗಾಗಿ, ನನಗೆ ಹಣ ಸಿಗುತ್ತಿಲ್ಲ ಎಂದು ಆರೋಪ ಮಾಡಿದ್ರು.
ಓದಿ: 'ನಾಲ್ಕೇ ನಾಲ್ಕು ಆಂಧ್ರ ಗುತ್ತಿಗೆದಾರರು ಈ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ': ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ