ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಪರ ಹೋರಾಟಗಾರನ ಪ್ರತಿಕೃತಿಗೆ ಬೆಂಕಿಯಿಟ್ಟ ಶಿವಸೇನೆ ಕಾರ್ಯಕರ್ತರ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಮಹಾರಾಷ್ಟ್ರದ ಯುವ ಸೇನೆ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಸಿಎಂ ಯಡಿಯೂರಪ್ಪನವರ ಪ್ರತಿಕೃತಿ ಹಾಗೂ ಬಾವುಟ ಸುಟ್ಟು ಮತ್ತೆ ಪುಂಡಾಟ ಪ್ರದರ್ಶಿಸಿದ್ದಾರೆ.
ಇನ್ನು ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟ ಪ್ರತಿಯಾಗಿ ಶಿವಸೇನೆ ವರಿಷ್ಠ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಬೆಳಗಾವಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. ಗಡಿ ವಿವಾದ ಕೆದಕಿ ಭಾಷಾ ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಧಿಕ್ಕಾರ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿದೆ. ಹೀಗಿದ್ದರೂ ಮಹಾರಾಷ್ಟ್ರ ಸರ್ಕಾರ ಹಾಗೂ ಸಿಎಂ ಠಾಕ್ರೆ ಗಡಿ ವಿವಾದ ಬಗ್ಗೆ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಮತ್ತೆ ಶಿವಸೇನೆ ಉದ್ಧಟತನ: ಕೊಲ್ಲಾಪುರದಲ್ಲಿ ಕನ್ನಡಪರ ಹೋರಾಟಗಾರನ ಪ್ರತಿಕೃತಿ ದಹನ
ಈ ಘಟನೆಗೆ ಮತ್ತೆ ತಿರುಗೇಟು ನೀಡುವ ಸಲುವಾಗಿ ಮಹಾರಾಷ್ಟ್ರದ ಯುವ ಸೇನೆ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ್ ಹೊರಟ್ಟಿ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಎರಚಿದರಲ್ಲದೆ ಪ್ರತಿಕೃತಿ ಕೂಡ ದಹನ ಮಾಡಿದ್ದಾರೆ. ಇದರಿಂದಾಗಿ ಸದ್ಯ ರಾಜ್ಯದ ಗಡಿ ಭಾಗದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ.
‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾಕಿ’ ಎಂಬ ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಭೀಮಾಶಂಕರ ಅವರ ಪ್ರತಿಕೃತಿಯ ಮೇಲೆ ಕನ್ನಡ ಧ್ವಜ ಹಾಕಿ ಅದರ ಸಮೇತ ಸುಟ್ಟು ಹಾಕಿದ್ದಾರೆ.