ಬೆಳಗಾವಿ:ಮಳೆಗಾಲದಲ್ಲಿ ಖಾನಾಪುರ ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ದಾಟಲು ಅನುಕೂಲವಾಗುವಂತೆ ಕಿರು ಸೇತುವೆಗಳನ್ನು ನಿರ್ಮಿಸುವ ಬಗ್ಗೆ ವಿಶೇಷ ಯೋಜನೆ ಜಾರಿಗೆ ತರುವ ಚಿಂತನೆಯಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ನದಿ ದಾಟಲು ಅನುಕೂಲವಾಗಲು ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಅದೇ ರೀತಿ ಖಾನಾಪುರ ತಾಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ವಿಶೇಷ ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮನೆಹಾನಿ ಹೆಚ್ಚಿನ ಪರಿಹಾರಕ್ಕೆ ಚಿಂತನೆ:ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಸದ್ಯಕ್ಕೆ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಲಾಗುತ್ತಿದೆ. ಸಂಪೂರ್ಣ ಕುಸಿದಿರುವ ಮನೆಗಳ ನಿರ್ಮಾಣಕ್ಕೆ ಐದು ಲಕ್ಷ ರೂ ಪರಿಹಾರವನ್ನು ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು. ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಸದ್ಯಕ್ಕೆ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನವೆಂಬರ್ ಬಳಿಕ ರಸ್ತೆ ನಿರ್ಮಾಣದ ಕುರಿತು ಪರಿಶೀಲಿಸಲಾಗುವುದು ಎಂದರು.
ಖಾನಾಪುರದಲ್ಲಿ 87 ಮನೆ ಭಾಗಶಃ ಕುಸಿತ: ಖಾನಾಪುರ ತಾಲೂಕಿನಲ್ಲಿ 87 ಮನೆಗಳು ಭಾಗಶಃ ಕುಸಿದಿವೆ. ನಾಲ್ಕು ಸಂಪೂರ್ಣವಾಗಿ ಕುಸಿದಿದ್ದು, ನಾಲ್ಕು ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಮಾಹಿತಿ ನೀಡಿದ ಸಚಿವರು, ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹಾನಿಯ ಪ್ರಮಾಣ ಕೂಡ ಹೆಚ್ಚಾಗಬಹುದು. ಹಾಗಾಗಿ ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿರುತ್ತದೆ. ವೇದಗಂಗಾ - ದೂಧಗಂಗಾ ಸೇರಿದಂತೆ ಎಲ್ಲ ನದಿಗಳ ಒಳಹರಿವು ಪ್ರಮಾಣದ ಮೇಲೆ ನಿಗಾವಹಿಸಲಾಗಿದೆ. ಇನ್ನು ಆಲಮಟ್ಟಿ ಜಲಾಶಯ ಭರ್ತಿಯಾದ ಬಳಿಕ ಒಳ ಹರಿವು ಆಧರಿಸಿ ಅದೇ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಮನೆಹಾನಿ ಪರಿಹಾರ ಚೆಕ್ ವಿತರಣೆ: ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಖೈರುನ್ನೀಸಾ ಹೇರೆಕರ ಹಾಗೂ ಗೋಪಾಲ್ ತಾರೋಡಕರ್ ಕುಟುಂಬದ ಸದಸ್ಯರಿಗೆ ತಲಾ 1.20 ಲಕ್ಷ ರೂ. ಪರಿಹಾರದ ಚೆಕ್ ಗಳನ್ನು ವಿತರಿಸಿದರು. ಪರಿಹಾರದ ಚೆಕ್ ಜತೆಗೆ ಅಕ್ಕಿ, ಬೆಲ್ಲ, ಚಹಾಪುಡಿ ಸೇರಿದಂತೆ ದೈನಂದಿನ ಬಳಕೆಗೆ ಅಗತ್ಯವಿರುವ ಆಹಾರ ಕಿಟ್ ಗಳನ್ನು ಕೂಡ ಸಂತ್ರಸ್ತ ಕುಟುಂಬಗಳಿಗೆ ನೀಡಲಾಯಿತು.
ಈ ವೇಳೆ ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಉಪ ವಿಭಾಗಾಧಿಕಾರಿ ರಾಜೇಶ್ ನಾಯಕ, ತಹಶಿಲ್ದಾರ ಪ್ರಕಾಶ್ ಗಾಯಕವಾಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂಓದಿ: ಕೈಕೊಟ್ಟ ಸರ್ವರ್.. ಗೃಹಲಕ್ಷ್ಮಿ ನೋಂದಣಿಗೆ ನೂಕು ನುಗ್ಗಲು, ಮಳೆಯಲ್ಲೂ ಸರತಿ ಸಾಲಲ್ಲಿ ನಿಂತ ಮಹಿಳೆಯರು!