ಬೆಳಗಾವಿ: ರೈತರ ಜಮೀನಿನಲ್ಲಿ ಮಿನಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ದೊಣ್ಣೆ, ಪೆಟ್ರೋಲ್, ಕುಡಗೋಲು ಹಿಡಿದು ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ನಗರದ ಹೊರವಲಯದಲ್ಲಿರುವ ರೈತ ಮಹಾದೇವ ಗೋಡಸೆ ಎಂಬುವವರಿಗೆ ಸೇರಿದ್ದ ಎರಡು ಎಕರೆ ಜಮೀನಿನ ಪೈಕಿ ಒಂದು ಎಕರೆ ನಾಲ್ಕು ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಆಗಮಿಸಿದ್ದರು. ಆದ್ರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು ಕೈಯಲ್ಲಿ ಕಟ್ಟಿಗೆ,ಕುಡುಗೋಲು ಪೆಟ್ರೋಲ್ ಹಿಡಿದುಕೊಂಡು ಬಂದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ತೋಟಗಾರಿಕ ಸಹಾಯಕ ನಿರ್ದೇಶಕ ಸೇರಿ ಇಬ್ಬರು ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ
ಈ ಸಂಬಂಧ ಬೆಳಗಾವಿ ಪಾಲಿಕೆ ಮತ್ತು ಕೆಯುಡಬ್ಲ್ಯುಎಸ್ ಅಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಲು ಮುಂದಾದಾಗ ರೈತ ಮಹಿಳೆಯರು ಅವರನ್ನ ತರಾಟೆಗೆ ತೆಗೆದುಕೊಂಡರು. ಆದ್ರೆ, ಪೊಲೀಸ್ ರಕ್ಷಣೆಯಲ್ಲಿ ಭೂಮಿಸ್ವಾಧೀನಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ ರೈತರು, ಮತ್ತವರ ಕುಟುಂಬದ ಮಹಿಳೆಯರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದ್ದಾರೆ.
ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ನೀಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.