ಬೆಳಗಾವಿ: ಕಳೆದ 24 ದಿನಗಳಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಅದು ಸಿಗದ ಹಿನ್ನೆಲೆ ಅರಣ್ಯ ಸಚಿವ ಉಮೇಶ ಕತ್ತಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಚಿರತೆ ಅಡಗಿರುವ ಗಾಲ್ಫ್ ಮೈದಾನದ ಗೇಟ್ ಮೇಲೆ ಏರಿ, ಅದರ ಒಳಗೆ ನುಗ್ಗಲು ಯತ್ನಿಸಿದರು.
ನಗರದ ಗಾಲ್ಫ್ ಮೈದಾನದ ಗೇಟ್ ಏರಿ ಕಾಂಗ್ರೆಸ್ ಕಾರ್ಯಕರ್ತೆ ಆಯೀಷಾ ಸನದಿ ಅವರು ಒಂದು ಗಂಟೆಗೂ ಅಧಿಕ ಕಾಲ ಹೈಡ್ರಾಮಾವನ್ನೇ ಸೃಷ್ಟಿಸಿದರು. ಬಳಿಕ ಗೇಟ್‌ನಿಂದ ತಾವೇ ಇಳಿದು ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕಳೆದ 24 ದಿನಗಳಿಂದ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ಸಾರ್ವಜನಿಕರ ಓಡಾಟಕ್ಕೆ, ಶಾಲಾ ಮಕ್ಕಳು ಶಾಲೆಗೆ ಹೋಗಲು ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.
ಅಲ್ಲದೇ ಅರಣ್ಯ ಸಚಿವ ಉಮೇಶ ಕತ್ತಿ ಈವರೆಗೆ ಒಮ್ಮೆಯೂ ಸ್ಥಳ ಪರಿಶೀಲನೆ ಮಾಡಿಲ್ಲ. ಹಾಗಾಗಿ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದ್ದು, ಸಚಿವ ಉಮೇಶ ಕತ್ತಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬೆಳಗಾವಿ..23 ದಿನದಿಂದ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನಿಸುತ್ತಿರುವ ಚಾಣಾಕ್ಷ ಚಿರತೆ
ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಸೋಲಿಸುತ್ತೇನೆ ಎಂದು ಅರಣ್ಯ ಸಚಿವರು ಹೇಳ್ತಾರೆ. ಆದ್ರೆ ಅವರಿಗೆ ಒಂದು ಚಿರತೆ ಹಿಡಿಯಲು ಆಗ್ತಿಲ್ಲ, ಇನ್ನೂ ಸತೀಶ್ ಜಾರಕಿಹೊಳಿ ಅವರನ್ನು ಹೇಗೆ ಸೋಲಿಸ್ತೀರಾ? ಎಂದು ಶಾಯರಿ ಹೇಳುವ ಮೂಲಕ ಸಚಿವ ಉಮೇಶ್ ಕತ್ತಿಗೆ ಟಾಂಗ್ ನೀಡಿದರು.
ಸತೀಶ್ ಜಾರಕಿಹೊಳಿ ಸಚಿವರಾಗಿದ್ರೆ, ಇಲ್ಲೇ ಇರುತ್ತಿದ್ದರು. ಇಂದು ನಾವು ಕಾಡಿನೊಳಗೆ ಹೋಗಲು ಬಂದಿದ್ದೇವೆ. ಇವತ್ತು ಬಿಡಲಿಲ್ಲ ಅಂದ್ರೆ ನಾಳೆ ಸಾವಿರಾರು ಹೆಣ್ಣುಮಕ್ಕಳು ಬರ್ತಾರೆ. 24 ಗಂಟೆಯಲ್ಲಿ ಚಿರತೆ ಸೆರೆ ಹಿಡಿಯಲು ಆಗದಿದ್ರೆ ನಿಮ್ಮ ಸ್ಥಾನ ರಾಜೀನಾಮೆ ಕೊಡಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.