ಚಿಕ್ಕೋಡಿ: ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸತ್ಕಾರ ಸ್ವೀಕಾರದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಉತ್ಸಾಹಿ ರಾಜಕಾರಣಿಯಾಗಿದ್ದಾರೆ. ಪಕ್ಷ ಕಟ್ಟುವ ಛಲ ಅವರಲ್ಲಿದೆ. ನಾವೆಲ್ಲರೂ ಅವರ ಜೊತೆಗೆ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದು ಅಪ್ರಸ್ತುತ. ಅವರ ಸಾಮರ್ಥ್ಯ ಹಾಗೂ ಪಕ್ಷ ಸೇವೆ ನೋಡಿ ಹೈಕಮಾಂಡ್ ಅವರಿಗೆ ಜವಾಬ್ದಾರಿ ನೀಡಿದೆ. ಹಿಂದೆ ಇದ್ದ ಕಾಂಗ್ರೆಸ್ ಬೇರೆ, ಮುಂದೆ ಬರಲಿರುವ ಕಾಂಗ್ರೆಸ್ ಬೇರೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.