ಬೆಳಗಾವಿ: ಧರ್ಮದ ಹೆಸರಿನಲ್ಲಿ ದೆಹಲಿ ಚುನಾವಣೆ ಅಖಾಡಕ್ಕಿಳಿದ ಬಿಜೆಪಿಗೆ ಅಲ್ಲಿನ ಮತದಾರ ಮನ್ನಣೆ ನೀಡಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಮ್ಮ ಪಕ್ಷದಿಂದ ಪ್ರಯತ್ನ ಆಗಿದೆ. ಆದರೆ ಅದಕ್ಕೆ ಯಶಸ್ಸು ಸಿಗಲಿಲ್ಲ ಎಂದರು. ಹಾಗೆಯೇ ಬಿಜೆಪಿ ಧರ್ಮದ ಹೆಸರಿನ ಮೇಲೆ ಗೆದ್ದು ಬರುತ್ತೇವೆ ಎಂಬ ಹುಮ್ಮಸ್ಸಿನಿಂದ ಪ್ರಚಾರ ಮಾಡಿತ್ತು. ಆದರೆ ಒಡೆದಾಳುವ ರಾಜಕಾರಣಕ್ಕೆ ದೆಹಲಿಯಲ್ಲಿ ಜನರು ಮನ್ನಣೆ ನೀಡಲಿಲ್ಲ ಎಂದು ತಿಳಿಸಿದ್ರು.
ಕಾಂಗ್ರೆಸ್ ಸೋಲಿನ ಬಗ್ಗೆ ವರ್ಕಿಂಗ್ ಕಮಿಟಿಯಲ್ಲಿ ಚರ್ಚೆ ನಡೆಸುತ್ತೇವೆ. ನಾನು ಕಲಬುರಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂವಿಧಾನ ಬದಲಾವಣೆ ಮಾಡಿ 371(J) ಅಡಿ ವಿಶೇಷ ಸ್ಥಾನಮಾನ ಕೊಡಿಸಿದ್ದೇನೆ. ರೈಲ್ವೆ ಮಾರ್ಗ, ಬೋಗಿ ಕಾರ್ಖಾನೆ ಆರಂಭಿಸಿದ್ದೇನೆ. ಯಾವುದೇ ಕಳಂಕ ಇಲ್ಲದೇ ಕೆಲಸ ಮಾಡಿದ್ದೇನೆ. ಕೆಲವು ಸಲ ಅಭಿವೃದ್ಧಿ ಇಲ್ಲದೆ ಅಜೆಂಡಾ ಮೇಲೆ ಗೆಲುವು ಸಾಧಿಸಬಹುದು. ಹೀಗಾಗಿ ನನ್ನ ಸೋಲಾಯಿತು. ಆದ್ರೆ ನರೇಂದ್ರ ಮೋದಿ ಅವರು ಎರಡೂ ಸಲ ಅಜೆಂಡಾ ಮೇಲೆ ಗೆದ್ದು ಪ್ರಧಾನಿ ಆದರು. ಅಲ್ಲದೇ ಮೋದಿ ಜನರನ್ನು ಭಾವನಾತ್ಮಕವಾಗಿ ಸೆಳೆದು, ಅಪಪ್ರಚಾರ ಮಾಡಿ ಗಮನ ಸೆಳೆದರು ಎಂದು ಖರ್ಗೆ ಆರೋಪಿಸಿದರು.
ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಟಿಪ್ಪಣಿ ವಿಚಾರಕ್ಕೆ ಪ್ರತಿಕ್ರಿಯಿಸಿ ಖರ್ಗೆ, ಸುಪ್ರೀಂ ಕೋರ್ಟ್ ನಿರ್ಧಾರ ತಪ್ಪು ಇದೆ ಎಂದು ಹೇಳಿದ್ದೇನೆ. ಮೂಲಭೂತವಾಗಿ ಮೀಸಲಾತಿ ಸಂವಿಧಾನದಲ್ಲಿರುವ ಹಕ್ಕು ಎಂದು ಪ್ರತಿಪಾದಿಸಿದರು.