ಬೆಳಗಾವಿ : 2014 ರಲ್ಲಿ ಗೋವಾ ರಾಜ್ಯದಲ್ಲಿ ಅಂದಿನ ಬಿಜೆಪಿ ಸರ್ಕಾರ ಶ್ರೀರಾಮ ಸೇನೆಯನ್ನು ನಿಷೇಧಿಸಿತ್ತು. ಆದರೆ, ಕೇಂದ್ರದಲ್ಲಿದ್ದ ಮೋದಿ ಸರ್ಕಾರ ಇದನ್ನೇಕೆ ವಿರೋಧಿಸಲಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ. ನಾವೂ ಕೂಡ ಆಂಜನೇಯನ ಭಕ್ತರು. ನಾವು ನಿಷೇಧಿಸುತ್ತಿರುವುದು ಒಂದು ಸಂಘಟನೆಯನ್ನಷ್ಟೇ ಅಂದು ಶ್ರೀರಾಮಸೇನೆ ನಿಷೇಧಿಸಿದ್ದರೂ ಗೋವಾ ಸರ್ಕಾರದ ವಿರುದ್ಧ ಚಕಾರ ಎತ್ತದ ಬಿಜೆಪಿ ನಾಯಕರು ಇಂದು ದುರುದ್ದೇಶಪೂರ್ವಕವಾಗಿ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಇದು ಡೆಲ್ಲಿ ಇಂಜಿನ್ ಸರ್ಕಾರವಲ್ಲ. ಬೆಂಗಳೂರು ಇಂಜಿನ್ ಸರ್ಕಾರಕ್ಕಾಗಿ ನಡೆದಿರುವ ಚುನಾವಣೆ. ಈ ಚುನಾವಣೆ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟ ಅರಿವು ಇದೆ. 1984ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದರು ಎಂದರು.
ಈ ಬಾರಿ ಸಿಂಗಲ್ ಇಂಜಿನ್ ಸರ್ಕಾರಕ್ಕೆ ಮಣೆ: ಆದರೆ, ಅದಾದ ನಾಲ್ಕು ತಿಂಗಳಲ್ಲೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಸಿಗದೇ, ರಾಮಕೃಷ್ಣ ಹೆಗಡೆ ನೇತೃತ್ವ ಜನತಾಪಕ್ಷ 135 ಸೀಟ್ ಪಡೆದು ಬಹುಮತದ ಸರ್ಕಾರ ರಚಿಸಿತ್ತು. ಈ ಬಾರಿಯೂ ಹೀಗೆ ಆಗಲಿದೆ. ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಜನತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟು ಈ ಬಾರಿ ಸಿಂಗಲ್ ಇಂಜಿನ್ ಸರ್ಕಾರಕ್ಕೆ ಮಣೆ ಹಾಕಲಿದ್ದಾರೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಕ್ಕೆ ನಿಜವಾದ ಸಿಂಗಲ್ ಇಂಜಿನ್ ಸರ್ಕಾರದ ಅವಶ್ಯಕತೆಯಿದೆ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ಗೆ ಹೊಸ ಹುಮ್ಮಸ್ಸು ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಬೀಸುತ್ತಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ನಾವು ಬರಲಿದ್ದೇವೆ. ಭ್ರಷ್ಟಾಚಾರದಲ್ಲಿ ಮುಳುಗೆದ್ದ 40 ಪರ್ಸೆಂಟ್ ಸರ್ಕಾರಕ್ಕೆ ಮುಕ್ತಿ ಕಾಣಿಸಬೇಕಿದೆ. ರಾಜ್ಯಕ್ಕೆ ನಿಜವಾದ ಸಿಂಗಲ್ ಇಂಜಿನ್ ಸರ್ಕಾರದ ಅವಶ್ಯಕತೆಯಿದೆ. ಡಬಲ್ ಇಂಜಿನ್ ಸರ್ಕಾರ ಎಂದರೆ ಎರಡೂ ಸರ್ಕಾರಗಳು ಅಭಿವೃದ್ಧಿಯತ್ತ ಸಾಗುತ್ತಿವೆ ಎಂಬರ್ಥವಲ್ಲ. ನಾನು ದೆಹಲಿಯಲ್ಲಿ ಪ್ರಧಾನಿ ಇದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ನನ್ನ ಕೈಗೊಂಬೆ ಆಗಿರಬೇಕು ಎಂಬುದು ಅವರ ಭಾವನೆ ಎಂದು ಜೈರಾಮ್ ರಮೇಶ್ ಟೀಕಿಸಿದರು.
ಕೇಂದ್ರದಲ್ಲಿ ಜೂಟ್, ರಾಜ್ಯದಲ್ಲಿ ಲೂಟ್ : ದೇಶದಲ್ಲಿ ಜೂಟ್ (ಸುಳ್ಳು ಆಶ್ವಾಸನೆ) ಸರ್ಕಾರ ಅಧಿಕಾರದಲ್ಲಿದ್ದರೆ ರಾಜ್ಯದಲ್ಲಿ ಲೂಟ್(ಲೂಟಿ ಹೊಡೆಯುವ) ಸರ್ಕಾರ ಅಧಿಕಾರದಲ್ಲಿದೆ. ಇವೆರಡು ಡಬಲ್ ಬೋಗಸ್ ಸರ್ಕಾರ ಎಂದು ಕಿಡಿಕಾರಿದರು. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್ಗೆ ಸಂಜೀವಿನಿ ದೊರಕಿದಂತಾಗಿತ್ತು.
ಇದೀಗ ಭಾರತ ಜೋಡೋ ಯಾತ್ರೆಯಿಂದಲೂ ಸಂಜೀವಿನಿ ಸಿಕ್ಕಿ ಮತ್ತಷ್ಟು ಆತ್ಮವಿಶ್ವಾಸ ಬಂದಿದೆ. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಜೈರಾಮ್ ರಮೇಶ್ ಭವಿಷ್ಯ ನುಡಿದರು. ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲೋಕ ಶರ್ಮಾ, ಮೋಹನ್ ಗುಪ್ತಾರ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮೋದಿ ರೋಡ್ ಶೋನಲ್ಲಿ ರಾರಾಜಿಸಿದ ಬಜರಂಗಿ ಧ್ವಜಗಳು: ಕೇಸರಿ ಕಾರ್ಯಕರ್ತರಿಂದ ಕಾಂಗ್ರೆಸ್ಗೆ ಟಕ್ಕರ್