ಬೆಳಗಾವಿ: ಸಂಸತ್ ಮುಂಗಾರು ಅಧಿವೇಶನ ವೇಳೆ ಪ್ರಧಾನಿ ನರೇಂದ್ರ ಮೋದಿಯವರೇ ಉಭಯ ಸದನಗಳಿಗೆ ಅಗೌರವ ತೋರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸದನದಲ್ಲಿ ಚರ್ಚೆ ನಡೆಯಲು ಅವಕಾಶ ಕೊಟ್ಟಿಲ್ಲ. ಪೆಗಾಸಸ್ ಗಂಭೀರ ವಿಷಯ. ಪ್ರಧಾನಿ ಮೋದಿ ಸದನಕ್ಕೆ ಯಾವುದೇ ಗೌರವ ತೋರಿಸಿಲ್ಲ. ಇಷ್ಟೆಲ್ಲ ಗಲಭೆ ಆದರೂ ಪ್ರಧಾನಿ ಮೋದಿ ಸದನಕ್ಕೆ ಬಂದು ಮಾತನಾಡಲಿಲ್ಲ. ಜನಸಾಮಾನ್ಯರ ಕೂಗು ಸರ್ಕಾರದ ಗಮನಕ್ಕೆ ತರೋದು ವಿಪಕ್ಷದವರ ಜನ್ಮಸಿದ್ಧ ಹಕ್ಕು. ಕೇಳುವುದು, ಬಿಡೋದು ಸರ್ಕಾರಕ್ಕೆ ಬಿಟ್ಟಿದ್ದು. ಕೇಳೋಕೆ ತಯಾರಿಲ್ಲ ಅಂದ್ರೆ ಅದು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದರು.
ದೇವೇಗೌಡರಿಗೆ ತಿರುಗೇಟು:
ರಾಷ್ಟ್ರೀಯ ಪಕ್ಷಗಳಿಂದ ಸಂವಿಧಾನಕ್ಕೆ ಅಗೌರವ ಎಂಬ ಹೆಚ್.ಡಿ. ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಹೇಳಿಕೆ ಬಗ್ಗೆ ಟೀಕೆ ಟಿಪ್ಪಣಿ ಮಾಡಕ್ಕಾಗಲ್ಲ. ದೇವೇಗೌಡರು ವಿರೋಧ ಪಕ್ಷದಲ್ಲಿದ್ದಾರಾ, ಆಳುವ ಪಕ್ಷದಲ್ಲಿದ್ದಾರಾ ಎಂಬುದನ್ನು ತಿಳಿದು ಮಾತನಾಡ್ತೇನೆ ಎಂದರು.
ಸ್ಪೀಕರ್ ಬಗ್ಗೆ ಟೀಕೆ :
ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಬಗ್ಗೆ ಟೀಕಿಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿಲುವನ್ನು ಖಂಡಿಸಿದರು. ಒಂದು ಸದನದ ಬಗ್ಗೆ ಮತ್ತೊಂದು ಸದನದ ಅಧ್ಯಕ್ಷರು ಟೀಕೆ ಮಾಡುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಎರಡ್ಮೂರು ದಿನಗಳ ಹಿಂದೆ ರಾಜ್ಯಸಭೆ, ಲೋಕಸಭೆ ಅಧಿವೇಶನ ಬಗ್ಗೆ ಸ್ಪೀಕರ್ ಕಾಗೇರಿ ಟೀಕಿಸಿದ್ದಾರೆ ಎಂದರು.
ವಿಧಾನಸಭೆ ಅಧ್ಯಕ್ಷರಾಗಿ ಕಾಗೇರಿಯವರಿಗೆ ಒಂದು ಅಧಿಕಾರ ಇದೆ. ರಾಜ್ಯಸಭೆಯಲ್ಲಿ ನಾನು 19 ವರ್ಷಗಳ ಕಾಲ ಸಕ್ರಿಯನಾಗಿ ಪಾಲ್ಗೊಂಡ ಸದಸ್ಯನಾಗಿ ಹೇಳಬಯಸುತ್ತೇನೆ. ಒಂದು ಸದನದ ಬಗ್ಗೆ ಮತ್ತೊಂದು ಸದನದ ಅಧ್ಯಕ್ಷರು ಟೀಕೆ ಮಾಡೋದನ್ನು ಎಲ್ಲಿಯೂ ನೋಡಿಲ್ಲ. ಮಾನ್ಸೂನ್ ಅಧಿವೇಶನದಲ್ಲಿ ನಡೆದಿದ್ದನ್ನು ಮಾತ್ರ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ವಿಪಕ್ಷದಲ್ಲಿದ್ದಾಗ ಯಾವ ರೀತಿ ಸದನ ನಡೆಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕಾಗುತ್ತೆ. ಬಹುಶಃ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯಸಭಾ ಇತಿಹಾಸ ತಿಳಿದುಕೊಂಡಿಲ್ಲ ಎಂದು ಜರಿದರು.
ರಾಷ್ಟ್ರೀಯ ಭದ್ರತೆಯ ವಿಚಾರ:
ಬಿಜೆಪಿಯವರು ವಿಪಕ್ಷದಲ್ಲಿದ್ದಾಗ ರಾಜ್ಯಸಭೆಯಲ್ಲಿ ಪೇಪರ್‌ಗಳು ಹಾರಾಡ್ತಿದ್ದವು. ಪೆಟ್ರೋಲ್, ಡೀಸೆಲ್ ಏರಿಕೆ, ರೈತರ ಕುರಿತು ಕರಾಳ ಕಾನೂನು, ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ಈ ಎಲ್ಲಾ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ. ಜನಸಾಮಾನ್ಯರ ಅನಿಸಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸvನ್ನು ಸದಸ್ಯರು ಮಾಡಬೇಕು. ರಾಷ್ಟ್ರದ ಭದ್ರತೆ ವಿಚಾರವಾಗಿ ಪೆಗಾಸಸ್ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕಿತ್ತು. 100 ಜನ ರಾಜಕೀಯ ನಾಯಕರು, 500 ಪತ್ರಕರ್ತರ ಫೋನ್ ಕದ್ದಾಲಿಕೆ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಫೋನ್ ಕದ್ದಾಲಿಕೆ ಆರೋಪವಿದೆ. ಇದು ರಾಷ್ಟ್ರೀಯ ಭದ್ರತೆಯ ವಿಚಾರ. ಈ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದೇ ತಪ್ಪಾಯ್ತಾ? ಕಾಗೇರಿ ಟೀಕಿಸುವ ಮುನ್ನ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಬಿ ಕೆ ಹರಿಪ್ರಸಾದ್ ಕುಟುಕಿದರು.
ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ತಿಗೆ ಭವ್ಯವಾದ ಪರಂಪರೆ ಇದೆ. ಕರ್ನಾಟಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವಕ್ಕೆ ಬಹಳ ಒತ್ತು ನೀಡಿದ ರಾಜ್ಯ ಕರ್ನಾಟಕ. ಇದರ ಸಂಸ್ಕೃತಿಯನ್ನು ಎತ್ತು ಹಿಡಿಯಬೇಕೆಂದು ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತೇನೆ. ಮುಂದೆ ಕರ್ನಾಟಕ ಬಿಹಾರ ಆಗೋದು ಬೇಡ, ಉತ್ತರ ಪ್ರದೇಶ ಆಗೋದು ಬೇಡ. ಪಕ್ಷಾತೀತವಾಗಿ ಸಭಾಧ್ಯಕ್ಷ ಕಾಗೇರಿ ಮಾತನಾಡಲಿ ಎಂದು ಒತ್ತಾಯಿಸಿದರು.
ಓದಿ: ಅಫ್ಘಾನಿಸ್ತಾನ ವಶಕ್ಕೆ ಪಡೆದ ತಾಲಿಬಾನ್: ಧಾರವಾಡದಲ್ಲಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳು