ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ನಾಲ್ಕು ಜನ ಸಹೋದರರ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಭೇಟಿ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದ್ದಾರೆ.
ಅವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮಗಳ ಜೊತೆ ಮಾತನಾಡಿ, ತಾಲೂಕಿನಲ್ಲಿ ಇದುವರೆಗೂ ಇಂಥದ್ದೊಂದು ದುರ್ಘಟನೆ ಸಂಭವಿಸಲಿಲ್ಲ, ಮಹಾ ದುರ್ಘಟನೆ ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 33 ಗಂಟೆಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇದು ಜನರ ಸಂರಕ್ಷಣೆಗೆ ನಾಯಕರು ಎಷ್ಟರ ಮಟ್ಟಿಗೆ ಮುಂದಾಗುತ್ತಾರೆ ಎಂಬುದನ್ನು ತಿಳಿಸುತ್ತದೆ ಎಂದು ಆಕ್ರೋಶ ಹೊರ ಹಾಕಿದರು.
ಕೊರೊನಾ ಸಂದರ್ಭದಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಒಮ್ಮೆಯೂ ತಾಲೂಕಿಗೆ ಭೇಟಿ ಕೊಟ್ಟಿಲ್ಲ. ಇವರು ಸಮಗ್ರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೋ..!? ಅಥವಾ ಬೆಳಗಾವಿ ನಗರಕ್ಕೆ ಮಾತ್ರ ಸೀಮಿತ ಸಚಿವರೋ ಎಂಬುದು ನಮಗೆ ಅರ್ಥ ಆಗುತ್ತಿಲ್ಲ. ಅಥಣಿಯು ಬೆಳಗಾವಿ ಜಿಲ್ಲೆಯಲ್ಲಿದ್ದು, ದಯವಿಟ್ಟು ತಾಲೂಕಿಗೆ ಭೇಟಿ ನೀಡಿ ಎಂದು ಹೇಳುವ ಮೂಲಕ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬ ಸದ್ಯ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಸೂಕ್ತವಾದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಓದಿ: ಕನ್ನಡಿಗರ ಭಾವನೆಗೆ ಧಕ್ಕೆ ತರುವ ನಿರ್ಧಾರ ಕೈಗೊಳ್ಳಬೇಡಿ ; ಕೇರಳ ಸಿಎಂಗೆ ಸಿದ್ದರಾಮಯ್ಯ ಮನವಿ