ಬೆಳಗಾವಿ : ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್ ಕಟ್ ಆಡಳಿತದ ಬಗ್ಗೆ ಎಚ್ಚರಿಕೆ ಇರಬೇಕು. ಪಕ್ಷ ಬದಲಾದರೂ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಂತೆ ಜೆಡಿಎಸ್ ಕೂಡ ಒಡೆದು ಆಳುವ ನೀತಿ ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದರು. ಬೈಲಹೊಂಗಲ ಮತಕ್ಷೇತ್ರದ ಬೈಲವಾಡದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಸವದತ್ತಿ, ರಾಮದುರ್ಗ, ಖಾನಾಪುರ, ಗೋಕಾಕ್, ಅರಭಾವಿ, ಯಮಕನಮರಡಿ, ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಶಾರ್ಟ್ ಕಟ್ ನೀತಿ ಬೇಡ : ಶಾರ್ಟ್ ಕಟ್ ರಾಜಕೀಯದಿಂದ ಎಂದಿಗೂ ಅಭಿವೃದ್ಧಿ ಸಾಧ್ಯವಿಲ್ಲ. ವಿಶೇಷವಾಗಿ ರಾಜ್ಯದ ಯುವ ಜನತೆ ಶಾರ್ಟ್ ಕಟ್ ನೀತಿಯಿಂದ ತಮ್ಮ ಜೀವನ ಶಾರ್ಟ್ ಮಾಡಿಕೊಳ್ಳಬಾರದು. ಶಾರ್ಟ್ ಕಟ್ ರಾಜಕೀಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಒಂದಿಷ್ಟು ಲಾಭ ಆಗಿರಬಹುದು. ಆದರೆ ಜನಸಾಮಾನ್ಯರಿಗೆ ಹಾನಿಯೇ ಹೆಚ್ಚು. ಶಾರ್ಟ್ ಕಟ್ ನೀತಿ ಬದಲಾಯಿಸಿ ವಿಕಾಸ ಯೋಜನೆಗೆ ಬಿಜೆಪಿ ಮನ್ನಣೆ ನೀಡುತ್ತಿದೆ. ಆದರೆ ಈಗಿನ ಯುವಕರು ಶಾರ್ಟ್ ಕಟ್ ಪಕ್ಷಗಳಿಗೆ ಅಧಿಕಾರ ಕೊಡುವುದಿಲ್ಲ. ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸದಿಂದ ಶಾರ್ಟ್ ಕಟ್ ರಾಜಕೀಯದಿಂದ ದೂರ ಇರೋ ತೀರ್ಮಾನ ಮಾಡಿದೆ. ಎಲ್ಲರಿಗೂ ಯೋಜನೆ ತಲುಪಬೇಕು ಎನ್ನುವುದು ನಮ್ಮ ನಿರ್ಧಾರ. ರಾಜ್ಯದಲ್ಲಿ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ತೀರ್ಮಾನ ಮಾಡಿದೆ. ಒಗ್ಗಟ್ಟು ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದಕ್ಕೂ ಮೊದಲು ಭಜರಂಗ ಬಲಿ ಕೀ ಜೈ, ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ ನಾಡಿನ ಎಲ್ಲರಿಗೂ ನಮಸ್ಕಾರಗಳು, ಈ ವೀರ ಪವಿತ್ರ ಭೂಮಿಗೆ ನಾನು ವಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಿಸಿದರು. ಕರ್ನಾಟಕ ರಾಜ್ಯವನ್ನು ನಾವು ನಂಬರ್ ಒನ್ ಮಾಡಲು ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಬೇಕು. ನಿಮ್ಮ ಉತ್ಸಾಹ, ಜೋಶ್ ನೋಡಿದರೆ ಖುಷಿಯಾಗುತ್ತದೆ. ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಸಭಿಕರಲ್ಲಿ ಮೋದಿ ಕ್ಷಮೆ ಕೇಳಿದರು. ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಸ್ಥಿರ ಸರ್ಕಾರ ರಚನೆಗೆ ಜನ ನಿಶ್ಚಯ ಮಾಡಿದ್ದಾರೆ. ಎಲ್ಲಾ ಕಡೆ ಒಂದೇ ಧ್ವನಿ ಕೇಳಿ ಬರುತ್ತಿದೆ. ಈ ಬಾರಿ ಜನರ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಬರಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕವನ್ನು ನಂಬರ್ ಒನ್ ಮಾಡಬೇಕಾ, ಬಿಜೆಪಿಗೆ ವೋಟ್ ಹಾಕಿ : ಕರ್ನಾಟಕದ ಜನ ಮತ್ತೆ ಡಬಲ್ ಎಂಜಿನ್ ಸರ್ಕಾರ ಬರಬೇಕು ಎಂಬ ಆಶಯ ರಾಜ್ಯದ ಜನ ಹೊಂದಿದ್ದಾರೆ. ಬಡವರು, ಮಧ್ಯಮ ವರ್ಗ, ಯುವಕರು, ರೈತರು, ದೀನ ದಲಿತರು, ಆದಿವಾಸಿಗಳು ಸೇರಿ ಎಲ್ಲ ಸಮುದಾಯವರು ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ವೇಗವಾಗಿ ಸಾಗಿದೆ. ಮತ್ತಷ್ಟು ಅಭಿವೃದ್ಧಿ ಕೈಗೊಂಡು, ಕರ್ನಾಟಕವನ್ನು ದೇಶದಲ್ಲಿ ನಂಬರ್ ಒನ್ ಮಾಡಬೇಕಾ ಎಂದು ಪ್ರಧಾನಿ ಮೋದಿ ಕೇಳಿದ ಪ್ರಶ್ನೆಗೆ ಆಗಬೇಕು ಎಂದು ವೇದಿಕೆಯತ್ತ ಉತ್ತರ ಕೇಳಿ ಬಂತು. ಹಾಗಾದರೇ ಬಿಜೆಪಿಗೆ ವೋಟ್ ಹಾಕಿ, ಪೂರ್ಣ ಬಹುಮತದ ಸರ್ಕಾರ ಅಧಿಕಾರಕ್ಕೆ ತರುವಂತೆ ಮೋದಿ ಕೋರಿದರು.
ಕಾಂಗ್ರೆಸ್ ತುಷ್ಠೀಕರಣದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ದೆಹಲಿ ಕುಟುಂಬದವರು ರಿಮೋಟ್ ಮೇಲೆ ರಾಜ್ಯವನ್ನು ನಿಯಂತ್ರಣ ಮಾಡುತ್ತಾರೆ. ಜೆಡಿಎಸ್ ಒಂದು ಪ್ರೈವೆಟ್ ಲಿಮಿಟೆಡ್ ಪಾರ್ಟಿ ಆಗಿದೆ. ಆದರೆ ಜನರೇ ಬಿಜೆಪಿಯ ಪರಿವಾರ. ಕಾಂಗ್ರೆಸ್, ಜೆಡಿಎಸ್ ಒಂದೇ ಕುಟುಂಬದ ಪಕ್ಷದ ಜೊತೆಗೆ, ಎಲ್ಲ ಕಡೆಯಿಂದ ತಿರಸ್ಕೃತಗೊಂಡಿವೆ. 2018ರಲ್ಲಿ ಜೆಡಿಎಸ್ ಗೆದ್ದ ಅರ್ಧದಷ್ಟು ಶಾಸಕರು ಮೂರೇ ಜಿಲ್ಲೆಯವರು ಇದ್ದಾರೆ. ಮುಳುಗುತ್ತಿರೋ ಹಡುಗನ್ನು ಬಿಟ್ಟು ಅನೇಕು ದೂರ ಹೋಗಿದ್ದಾರೆ. ಅವರ ಭವಿಷ್ಯ ನಿರ್ಧಾರ ಮಾಡದೇ ಇರೋವರು ರಾಜ್ಯ ಭವಿಷ್ಯ ಹೇಗೆ ನಿರ್ಧಿಸುತ್ತಾರೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್ಗೆ ಸುಳ್ಳು ಹೇಳುವುದು ಅನಿವಾರ್ಯ : ಅನೇಕ ವರ್ಷಗಳಿಂದ ಕಾಂಗ್ರೆಸ್ ರಾಜ್ಯವನ್ನು ಆಳಿದೆ. ಸರ್ಕಾರಿ ನೌಕರಿ ಪರೀಕ್ಷೆಗಳು ಹಿಂದೆ ಇಂಗ್ಲಿಷ್ ನಲ್ಲಿ ಮಾತ್ರ ಆಗುತ್ತಿದ್ದವು. ಆದರೆ ಬಿಜೆಪಿ ಸರ್ಕಾರ ಸ್ಥಳೀಯ ಭಾಷೆಗಳಿಗೆ ಈಗ ಅವಕಾಶ ಕಲ್ಪಿಸಿ ಎಲ್ಲಾ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸುತ್ತಿದೆ. ವೀರ ಸಾವರ್ಕರ್ ಅವರನ್ನು ಪದೇ ಪದೇ ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆ. ಬಿ ಆರ್ ಅಂಬೇಡ್ಕರ್ ಬದುಕಿದ್ದಾಗ ಪದೇ ಪದೇ ಅಪಮಾನ ಮಾಡಿದರು. ಕರ್ನಾಟಕದ ಲಿಂಗಾಯತ ನಾಯಕರಾದ ವಿರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರಿಗೂ ಅದೇ ಮಾನಸಿಕತೆಯಿಂದ ಅಪಮಾನ ಮಾಡಿದರು. ಕಿತ್ತೂರು ರಾಣಿ ಚೆನ್ನಮ್ಮಾಜಿ ಶೌರ್ಯದ ಬಗ್ಗೆ ನಮಗೆಲ್ಲ ಗೌರವ ಇದೆ. ಸೇನೆಯಲ್ಲಿ ಈಗ ಯುವತಿಯರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಆರಂಭಿಸಲು ಸಿದ್ಧವಾಗಿದೆ. ಕಾಂಗ್ರೆಸ್ ಗೆ ಸುಳ್ಳು ಹೇಳುವುದು ಅನಿವಾರ್ಯ ಆಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
2009ರಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿ ಕೊಟ್ಟಿದ್ದರು. ಎಲ್ಲಾ ಗ್ರಾಮಗಳಿಗೆ ಬ್ರ್ಯಾಂಡ್ ಬ್ಯಾಂಡ್ ಸೌಲಭ್ಯ ಕೊಡೊ ಭರವಸೆ ನೀಡಿದ್ದರು. ಕೇವಲ ನೂರು ಗ್ರಾಮ ಪಂಚಾಯತಿಗಳಿಗೆ ಮಾತ್ರ ಸೌಲಭ್ಯ ಕೊಟ್ಟರು. ನಮ್ಮ ಸರ್ಕಾರ ಬಂದ ಮೇಲೆ 2 ಲಕ್ಷ ಪಂಚಾಯಯಿತಿಗಳಿಗೆ ಬ್ರ್ಯಾಂಡ್ ಬ್ಯಾಂಡ್ ಸೌಲಭ್ಯ ಒದಗಿಸಲಾಗಿದೆ. ಡಿಜಿಟಲ್ ಇಂಡಿಯಾ ಸ್ಪರ್ಧೆ ಮಾಡುವಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಹಿಂದೆ ಬಿದ್ದಿವೆ. ಗ್ಯಾರಂಟಿ ಹೆಸರಿಲ್ಲ ಮೋಸ ಮಾಡಿದ್ದು ಕಾಂಗ್ರೆಸ್ ನವರು. ಬಿಜೆಪಿ ಸರ್ಕಾರ ಬಂದ ಮೇಲೆ ಕೆಲಸ ಮಾಡಿದೆ.
2004ರಲ್ಲಿ ಕಾಂಗ್ರೆಸ್ ನವರು ವಿದ್ಯುತ್ ಹೆಸರಿನಲ್ಲಿ ಗ್ಯಾರಂಟಿ ಕೊಟ್ಟರು. 2014ರಲ್ಲಿಯೂ 2.5 ಲಕ್ಷ ಕುಟುಂಬಗಳಿಗೆ ವಿದ್ಯುತ್ ನೀಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಬೆಳಗಾವಿ ಜಿಲ್ಲೆಯ 40 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಸಿಕ್ಕಿದೆ. ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ದೇಶದ ಅತಿದೊಡ್ಡ ರೈಲು ನಿಲ್ದಾಣಗಳಲ್ಲಿ ಹುಬ್ಬಳ್ಳಿ ಒಂದಾಗಿದೆ. ಕಾಂಗ್ರೆಸ್- ಜೆಡಿಎಸ್ ಸರ್ಕಾರ ರೈತರ ಹಲವು ಸಮಸ್ಯೆಗಳನ್ನು ಜೀವಂತ ಇಟ್ಟರು. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ. ಎಥೆನಾಲ್ ಬಳಕೆಯಿಂದ ಕಬ್ಬು ಬೆಳೆಗಾರರ ಸಮಸ್ಯೆ ಕಡಿಮೆ ಆಗಿದೆ. ಹೆಚ್ಚು ಎಥಿನಾಲ್ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಹೆಚ್ಚು ಹಣ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಬಿಜೆಪಿ ನಾಯಕರು ರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಮತ್ತು ಕಂಬಳಿ ಹೊದಿಸಿದರು. ವೇದಿಕೆಯಿಂದ ತೆರಳುವ ಮುನ್ನ ಜನರಿಗೆ ತಲೆ ಬಾಗಿ ಪ್ರಧಾನಿ ಮೋದಿ ನಮಿಸಿದರು. ಕಾರ್ಯಕ್ರಮದಲ್ಲಿ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಇದ್ದರು.
ಇದನ್ನೂ ಓದಿ : ಹನುಮಂತ ನಮ್ಮ ಜೇಬಿನಲ್ಲಿಲ್ಲ, ಹೃದಯದಲ್ಲಿದ್ದಾನೆ: ಗೌರವ್ ಭಾಟಿಯಾ