ಬೆಳಗಾವಿ: ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಪ್ರಾಣವನ್ನು ಪಣಕಿಟ್ಟು ನಿತ್ಯ ಸೆಣಸಾಡುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕ ಸಿಬ್ಬಂದಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಇಂದು ಸನ್ಮಾನಿಸಲಾಯಿತು.
ನಗರದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ವಿ. ರಾಜೇಂದ್ರ, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್ ಹಾಗೂ ಡಿಸಿಪಿ ಯಶೋಧಾ ಒಂಟಗೋಡಿ ಅವರು ಸಿಬ್ಬಂದಿಗೆ ಹೂ ಗುಚ್ಛ ನೀಡಿ ಗೌರವಿಸಿದರು.
ಜಿಲ್ಲೆಯ ಮುಂದಾಳತ್ವ ವಹಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕೆಎಸ್ಆರ್ಟಿಸಿ ಎಂ.ಡಿ. ರಾಜೇಂದ್ರ ಚೋಳನ್ ಅಭಿನಂದಿಸಿದರು.
ಮನೆಗೂ ಹೋಗದೇ, ಸಂಕಷ್ಟದ ಸಮಯದಲ್ಲಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ಮತ್ತು ಇತರ ಎಲ್ಲ ಇಲಾಖೆಗಳ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.