ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೂ ಮೌನ ಮುರಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಬೆಳಗಾವಿಯ ಡಿಸಿ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವನ್ನು ಈಗಾಗಲೇ ಗೃಹ ಸಚಿವರು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮೇಲೆ ಅನಗತ್ಯ ಆರೋಪ ಮಾಡಿದ್ದು ಮನೆಮಾತಾಗಿದೆ. ದುರುದ್ದೇಶಪೂರಕವಾಗಿ ಆರೋಪ ಮಾಡಿದ್ದಾರೆಂಬುದು ಚರ್ಚೆಯಾಗುತ್ತಿರುವ ವಿಷಯ. ಕಾನೂನು ಚೌಕಟ್ಟಿನಲ್ಲಿ ಏನಾಗುತ್ತೆ ಅಂತ ಕಾದು ನೋಡೋಣ ಎಂದಿದ್ದಾರೆ.
ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಪ್ರಭಾವ ಬೀರಲ್ಲ. ಉಪಚುನಾವಣೆ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಬರುವಂತೆ ವಿನಂತಿ ಮಾಡುತ್ತೇನೆ ಎಂದು ಹೇಳಿದರು.
ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಕಾರಣ ಚುನಾವಣೆ ಬಂದಿದೆ. ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಜಿಲ್ಲೆಯ ನಾಯಕರದ್ದಾಗಿತ್ತು. ಈ ಕಾರಣಕ್ಕೆ ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ನೀಡಲಾಗಿದೆ. ಅಂಗಡಿ ಅವರ ಸೇವೆ ಮತದಾರರ ಮನದಲ್ಲಿದೆ. ಈ ಕಾರಣಕ್ಕೆ ಬೆಳಗಾವಿ ಲೋಕಸಭೆ ಕ್ಷೇತ್ರ ಸೇರಿ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಧಿಕ ಮತಗಳಿಂದ ಗೆಲುವು ಸಾಧಿಸಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.