ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಪ್ರಮುಖ ಕೊಂಡಿಯಾಗಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಫೈವ್ ಸ್ಟಾರ್ ಇಂಡಸ್ಟ್ರೀಸ್ ಎಸ್ಟೇಟ್ ಮತ್ತು ಫೌಂಡ್ರಿ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈಟಿವಿ ಭಾರತ ಈ ಕುರಿತು ವರದಿ ಪ್ರಸಾರ ಮಾಡಿತ್ತು. ಈಟಿವಿ ಭಾರತದ ಸಾಮಾಜಿಕ ಕಳಕಳಿಗೆ ಬೆಳಗಾವಿಯ ಉದ್ಯಮಿ ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ದಿನ ದಿನಕ್ಕೆ ಕುಂದಾನಗರಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಅದಕ್ಕೆ ತಕ್ಕುದಾಗಿ ಬೃಹತ್ ಕೈಗಾರಿಕೆಗಳು ಇಲ್ಲಿಲ್ಲ. ಪರಿಣಾಮ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಪುಣೆ ಸೇರಿ ಇನ್ನಿತರ ಕಡೆ ವಲಸೆ ಹೋಗುವ ದುಸ್ಥಿತಿಯಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಫೌಂಡ್ರಿ ಪಾರ್ಕ್ ನಿರ್ಮಿಸುವಂತೆ ಆಗ್ರಹಿಸಿದ್ದ ಈ ಭಾಗದ ಉದ್ಯಮಿಗಳಿಗೆ ಈಟಿವಿ ಭಾರತ ಸಾಥ್ ಕೊಟ್ಟಿತ್ತು.
ಫೈವ್ ಸ್ಟಾರ್ ಇಂಡಸ್ಟ್ರೀಸ್ ಎಸ್ಟೇಟ್: ಚಳಿಗಾಲ ಅಧಿವೇಶನಕ್ಕೂ ಮುನ್ನ ವಿಸ್ತ್ರತ ವರದಿ ಕೂಡ ಪ್ರಸಾರ ಮಾಡಿತ್ತು. ಆ ವರದಿ ಸರ್ಕಾರದ ಗಮನ ಸೆಳೆದಿದ್ದು, ಅಧಿವೇಶನದ ಕೊನೆಯ ದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಫೈವ್ ಸ್ಟಾರ್ ಇಂಡಸ್ಟ್ರೀಸ್ ಎಸ್ಟೇಟ್ ಹಾಗೂ 500 ಎಕರೆಯಲ್ಲಿ ಫೌಂಡರಿ ಪಾರ್ಕ್ ಸ್ಥಾಪಿಸುವ ಬಗ್ಗೆ ಘೋಷಿಸಿದ್ದಾರೆ. ಇದಕ್ಕೆ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದರು.
ಈಟಿವಿ ಭಾರತ ಜೊತೆಗೆ ಉದ್ಯಮಿ ರೋಹನ ಜುವಳಿ ಮಾತನಾಡಿ, ಕರ್ನಾಟಕ ಸರ್ಕಾರ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಉತ್ತರ ಕರ್ನಾಟಕದ ಉದ್ಯಮಿಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಅಧಿವೇಶನದೊಳಗೆ ಇಂಡಸ್ಟ್ರೀಯಲ್ ಎಸ್ಟೇಟ್, ಫೌಂಡ್ರಿ ಪಾರ್ಕ್ ಉದ್ಘಾಟನೆ ಆಗಬೇಕು ಎಂದು ಕೇಳಿಕೊಂಡರು.
ಸಾವಿರಾರು ಯುವಕರಿಗೆ ಉದ್ಯೋಗ: ಈಟಿವಿ ಭಾರತದ ವರದಿ ಜಿಲ್ಲೆ ಸೇರಿ ಇಡೀ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿತ್ತು. ಸರ್ಕಾರದ ಈ ಯೋಜನೆಯಿಂದ ಉ.ಕ. ಭಾಗದ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ. ಹಾಗಾಗಿ, ಈಟಿವಿ ಭಾರತಕ್ಕೆ ನಾವು ಚಿರಋಣಿ ಆಗಿರುತ್ತೇವೆ ಎಂದು ರೋಹನ ಜುವಳಿ ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆ.. ಮಹಾರಾಷ್ಟ್ರ ಮಾದರಿ ನಿರ್ಣಯಕ್ಕೆ ಉದ್ಯಮಿಗಳ ಒತ್ತಾಯ