ಬೆಳಗಾವಿ: ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಹಣ ಮತ್ತು ನೆರೆ ಪರಿಹಾರ ನೀಡುವಂತೆ ರೈತ ಮುಖಂಡರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು. ಇದಕ್ಕೆ ಪರಿಹಾರ ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು.
ದಿ. ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಿಂದ ಬೆಂಗಳೂರಿನತ್ತ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ (19) ತಡೆಗೆ ಕೈಗೊಳ್ಳಬೇಕಾದ ಅಗತ್ಯವಿರುವ ಕ್ರಮಗಳು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಅಲ್ಲಿಂದ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೂ ಮುನ್ನ ರೈತ ಮುಖಂಡರ ಸಮಸ್ಯೆ ಆಲಿಸಿ, ಪರಿಹಾರದ ಭರವಸೆ ನೀಡಿದರು.