ಬೆಳಗಾವಿ: ''ಸಿಎಂ ಬದಲಾವಣೆ ಪ್ರಶ್ನೆ ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆಯೇ ಹೊರತು ಒಳಗಡೆ ಏನೂ ಕೇಳಿ ಬರುತ್ತಿಲ್ಲ. ಯಾವ ಸಚಿವರು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ. ಇನ್ನೂ ಯಾರಾದ್ರೂ ಸಚಿವರು ಆ ರೀತಿ ಹೇಳಿಕೆ ಕೊಟ್ಟಿದ್ದರೆ, ಅದನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತದೆ'' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಮ್ಮ ಮುಂದಿರುವ ಮುಖ್ಯವಾದ ಉದ್ದೇಶ ಎಂದರೆ, ಕರ್ನಾಟಕ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಕೊಟ್ಟ ಭರವಸೆ ಈಡೇರಿಸುವತ್ತ ಮಾತ್ರ ನಾವು ಗಮನಹರಿಸುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಇಲ್ಲ'' ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರಾ ಅಥವಾ ಬದಲಾವಣೆ ಆಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನಾನು ಖರ್ಗೆ ಸಾಹೇಬರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಕೊಡುವುದಿಲ್ಲ. ಆ ಪ್ರಶ್ನೆ ನನ್ನನ್ನು ನೀವು ಕೇಳುವುದೇ ತಪ್ಪು'' ಎಂದು ಹೆಬ್ಬಾಳ್ಕರ್ ಹೇಳಿದರು. ''ಜೂನ್ 3ನೇ ವಾರ ಬಂದರೂ ಇನ್ನೂ ಮುಂಗಾರು ಮಳೆ ಆರಂಭವಾಗದ ಹಿನ್ನೆಲೆಯಲ್ಲಿ ಅವಶ್ಯಕತೆ ಬಿದ್ದರೆ, ಮೋಡ ಬಿತ್ತನೆ ಸೇರಿ ಮತ್ತಿತರ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ'' ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರತಿಭಟನೆ, ಎಲ್ಲರೂ ಪಾಲ್ಗೊಳ್ಳುವಂತೆ ಬಿಜೆಪಿ ವ್ಯಂಗ್ಯ
ಸಿಎಂ ಬದಲಾವಣೆ ವಿಚಾರ- ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು:''ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅರ್ಧಕ್ಕೆ ಅಂತ ಯಾರೂ ಕೂಡ ಹೇಳಿಲ್ಲ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂಬ ವಿಶ್ವಾಸವಿದೆ. ಅದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ'' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಅನ್ನಭಾಗ್ಯ ಅಕ್ಕಿ ಖರೀದಿಗೆ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಕ್ಕಿ ಖರೀದಿಸುವ ನಿಟ್ಟಿನಲ್ಲಿ ಎಲ್ಲಾವನ್ನು ಸರಿ ಮಾಡುತ್ತೇವೆ. ಬಿಜೆಪಿ ಪಕ್ಷದವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯವರಿಗೆ ಸಂಬಂಧಪಟ್ಟ ವಿಚಾರವಲ್ಲ. ಪ್ರಧಾನಮಂತ್ರಿ ಮೋದಿ ಅವರು 15 ಲಕ್ಷ ರೂ. ಕೊಡುತ್ತೀನಿ ಎಂದು ಹೇಳಿದ್ದರು ಕೊಟ್ಟಿದ್ದಾರಾ? ಅವರ ಹತ್ತು ಭರವಸೆಗಳು ಹಾಗೇ ಇವೆ. ನಮ್ಮ ಸರ್ಕಾರ ರಚನೆಯಾಗಿ ಕೆಲವು ದಿನಗಳು ಕಳೆದಿದೆ. ಇನ್ನೂ ಕಾಲಾವಕಾಶ ಬೇಕು. ಎಲ್ಲವು ಸರಿ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಠ್ಯ ಪುಸ್ತಕ ಶಿಕ್ಷಣ ವಿರುದ್ಧವಾಗಿದ್ದು, ಅದನ್ನು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ್ದೆವು. ಇದರಿಂದ ಪಠ್ಯ ಪರಿಷ್ಕಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಇದನ್ನೂ ಓದಿ: ಬಿಜೆಪಿಯ ಸುಳ್ಳಿನ ಫ್ಯಾಕ್ಟರಿ ಬಂದ್ ಮಾಡುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ