ಅಥಣಿ (ಬೆಳಗಾವಿ): ಸತತ ನಾಲ್ವತ್ತು ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ನಾಡು ನುಡಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ಬಿ ಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಪ್ರಯತ್ನವನ್ನು ನಾವು ಕನ್ನಡಿಗರು ಖಂಡಿಸುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. ಅವರು ಅಥಣಿ ಪಟ್ಟಣದ ಖಾಸಗಿ ಕಾಯಕ್ರಮಕ್ಕೆ ಆಗಮಿಸಿ ಈಟಿವಿ ಭಾರತ ಜೊತೆ ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದಿರುವ ಬಿಎಸ್ವೈ ಅವರನ್ನು ವಯಸ್ಸಿನ ಕಾರಣ ಹೇಳಿ ಅಧಿಕಾರದಿಂದ ಹಿಂದೆ ಸೇರಿಸುವುದು ಸಮಂಜಸವಲ್ಲ. ಯಡಿಯೂರಪ್ಪನವರು ಈಗಾಗಲೇ ಸಾಕಷ್ಟು ಬಾರಿ ಕನ್ನಡ ಪರವಾಗಿ ಧ್ವನಿಯೆತ್ತಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಪಕ್ಷದವರು ಮೂಲೆ ಗುಂಪು ಮಾಡುತ್ತಿರುವುದು ಖಂಡನೀಯ.
ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಗಡಿ ರಕ್ಷಣೆಗೆ ಬಿಜೆಪಿಗೆ ಅದರಲ್ಲೂ ಬಿ ಎಸ್ ಯಡಿಯೂರಪ್ಪನವರಿಗೆ ಕನ್ನಡಿಗರು ಮತ ನೀಡಿದ್ದಾರೆ. ಇವತ್ತು ಅವರನ್ನು ಪಕ್ಕಕ್ಕೆ ಸರಿಸುವುದು ಸಮಂಜಸವಲ್ಲ. ಹೀಗೆ ಮುಂದುವರೆದರೆ ನಾವು ಪ್ರಾದೇಶಿಕದತ್ತ ಒಲವು ತೊರಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಕನ್ನಡ ಧ್ವಜ ಯಾವತ್ತೂ ಹಾರಲೇಬೇಕು, ಇರಲೇಬೇಕು. ಮಹಾರಾಷ್ಟ್ರದ ಶಿವಸೇನೆಗೆ ಯಾರೂ ಇಲ್ಲಿ ಭಯಪಡುವ ಅಗತ್ಯವಿಲ್ಲ. ನಮ್ಮ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಬೆಳಗಾವಿಯಲ್ಲಿ ಕನ್ನಡ ಧ್ವಜ ಬಗ್ಗೆ ಯಾವುದೇ ಸರ್ಕಾರ ತಕರಾರು ತೆಗದರೂ ಅವರು ಪರಿಣಾಮ ಎದುರಿಸಬೇಕೆಂದು ಎಚ್ಚರಿಕೆ ನೀಡಿದರು.
ನವೆಂಬರ್ ಒಂದರಂದು ಕನ್ನಡ ನೆಲದಲ್ಲಿ ಶಿವಸೇನೆ ಕರಾಳ ದಿನವನ್ನು ಆಚರಣೆ ಮಾಡುತ್ತಾರೆ. ಇದನ್ನು ಕನ್ನಡ ಪರ ಹೋರಾಟಗಾರರು ವಿರೋಧಿಸಿದರೆ ನಮ್ಮನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಸರ್ಕಾರಗಳು ಮಾಡುತ್ತಾರೆ, ಇದು ವಿಷಾದನೀಯ. ಮಹಾರಾಷ್ಟ್ರ ಸರ್ಕಾರ ಗಡಿ ರಕ್ಷಣೆಗೆ ಪ್ರತ್ಯೇಕ ಮೂರು ಜನ ಸಚಿವರನ್ನು ನೇಮಿಸಿದ್ದಾರೆ. ನಮ್ಮ ಕರ್ನಾಟಕ ಸರ್ಕಾರ ಗಡಿ ಪ್ರದೇಶ ಅಭಿವೃದ್ಧಿ ರಕ್ಷಣೆಗೆ ಸಚಿವರನ್ನು ನೇಮಿಸಿಲ್ಲ, ಇದು ವಿಷಾದನೀಯ ಎಂದರು.
ಕರ್ನಾಟಕ ಗಡಿ ಭಾಗದಲ್ಲಿ ಗಡಿ ಭಾಗದ ಪ್ರಾಧಿಕಾರ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಗಡಿಯಲ್ಲಿ ಕನ್ನಡ ಧ್ವಜ ಬಿಟ್ಟು ಬೇರೆ ಧ್ವಜಗಳನ್ನು ಹಾರಿಸುತ್ತಿರುವುದನ್ನು ಕೆಜಿಎಫ್ನಲ್ಲಿ ನಾವು ನೊಡುತಿದ್ದೇವೆ. ಶಿವಾಜಿ ಮಹಾರಾಜರು ಸ್ವಾತಂತ್ರ್ಯ ಹೋರಾಟಗಾರು ಹಾಗೂ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ, ಶಿವಾಜಿ ಮಹಾರಾಜರ ಹೆಸರಲ್ಲಿ ಸಂಗೊಳ್ಳಿ ರಾಯಣ್ಣನನ್ನು ಪಕ್ಕಕ್ಕೆ ಸರಿಸಿದರೆ ಕನ್ನಡಿಗರು ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಥಣಿ ಭಾಗದಲ್ಲಿ ಪ್ರಭಾವಿ ರಾಜಕಾರಣಿಗಳು ಇದ್ದಾರೆ. ಅಥಣಿ ಹಾಗೂ ಗಡಿ ಭಾಗದಲ್ಲಿ ಅಭಿವೃದ್ಧಿ ಸಾಲದು. ಪ್ರಭಾವಿ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಈ ಭಾಗದ ರಾಜಕಾರಣಿಗಳು ಇಲ್ಲಿನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದರು.