ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ 76.80 ಕೋಟಿ ರೂ ಯೋಜನಾ ಮೊತ್ತದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ (ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ) ವನ್ನು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾಗಿರುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ನ ಕಾರ್ಯ ವೈಖರಿಯ ಬಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ನೀಡಿದರು. ಅದೇ ರೀತಿ ಮಹಾನಗರ ಪಾಲಿಕೆಯ ಕಾಮಗಾರಿಗಳ ಕುರಿತು ಪಾಲಿಕೆ ಆಯುಕ್ತರಾದ ಜಗದೀಶ್ ವಿವರಿಸಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಅಶೋಕ ನಗರದಲ್ಲಿರುವ ಈಜುಕೊಳ ಹಾಗೂ ವ್ಯಾಯಾಮ ಶಾಲೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಭವನ (ಕಚೇರಿ ಸಂಕೀರ್ಣ) ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು.
ಸಿಟಿಜನ್ ಆಪ್ ಬಿಡುಗಡೆ: ಬೆಳಗಾವಿ ನಾಗರಿಕ ಸೇವಾ ಅಪ್ಲಿಕೇಷನ್ ಅನ್ನು ಮುಖ್ಯಮಂತ್ರಿಗಳು ಸಾರ್ವಜನಿಕ ಬಳಕೆಗೆ ಬಿಡುಗಡೆಗೊಳಿಸಿದರು. ಇದರಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಕೂಡ ಈ ಆಪ್ ಮೂಲಕ ಕಮಾಂಡ್ ಸೆಂಟರ್ಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯ ರೈಲ್ವೆ ಸಚಿವರಾದ ಸುರೇಶ್ ಅಂಗಡಿ, ಡಿಸಿಎಂ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮುಂತಾದವರು ಉಪಸ್ಥಿತರಿದ್ದರು.