ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ಇಂದು ಆಗಮಿಸಿದ ಬಿಎಸ್ವೈ, ದಿ. ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
![cm bs yadiyurappa visits suresh andagi house](https://etvbharatimages.akamaized.net/etvbharat/prod-images/kn-bgm-02-07-cm-visited-suresh-angadi-home-vsl-01-ka10029_07102020110832_0710f_00444_854.jpeg)
ನಂತರ ಕುಟುಂಬದ ಸದಸ್ಯರ ಜತೆ ಮಾತನಾಡಿದ ಅವರು, ದಿ.ಸುರೇಶ್ ಅಂಗಡಿ ಅವರ ಸಜ್ಜನಿಕೆಯ ನಡವಳಿಕೆಯನ್ನು ಸ್ಮರಿಸಿದರು. ಅಂಗಡಿ ಅವರ ತಾಯಿ ಸೋಮವ್ವ ಅವರ ಕೈಹಿಡಿದು ಕೆಲಹೊತ್ತು ಭಾವುಕರಾದ ಸಿಎಂ, ಧೈರ್ಯ ತುಂಬಿದರು.
ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ದುಃಖ ವ್ಯಕ್ತಪಡಿಸಿದ ಅವರು, ಸುರೇಶ್ ಅಂಗಡಿ ಆಸ್ಪತ್ರೆಯಲ್ಲಿ ಇದ್ದಾಗ ಆರೋಗ್ಯವಾಗಿ ಇದ್ದೀನಿ ಎಂದು ತಿಳಿಸಿದ್ದನ್ನು ನೆನಪಿಸಿಕೊಂಡರು.
![cm bs yadiyurappa visits suresh andagi house](https://etvbharatimages.akamaized.net/etvbharat/prod-images/kn-bgm-02-07-cm-visited-suresh-angadi-home-vsl-01-ka10029_07102020110832_0710f_00444_635.jpg)
ದೆಹಲಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸೂಚನೆ:
ದೆಹಲಿಯ ರುದ್ರಭೂಮಿಯ ಅಭಿವೃದ್ಧಿಯ ಜತೆಗೆ ಅಲ್ಲಿ ದಿ.ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
![cm bs yadiyurappa visits suresh andagi house](https://etvbharatimages.akamaized.net/etvbharat/prod-images/kn-bgm-02-07-cm-visited-suresh-angadi-home-vsl-01-ka10029_07102020110832_0710f_00444_304.jpg)
ಸುರೇಶ್ ಅಂಗಡಿ ಅವರ ಸಂಬಂಧಿಕರು ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಬಾಕಿ ಉಳಿದಿದ್ದ ರೈಲ್ವೆ ಇಲಾಖೆಯ ಬಹುತೇಕ ಯೋಜನೆಗಳಿಗೆ ಅಂಗಡಿ ಅವರು ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ವಿವಿಧ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ತೀವ್ರ ಆಸಕ್ತಿಯಿಂದ ಸುರೇಶ್ ಅಂಗಡಿ ಕೆಲಸ ಮಾಡುತ್ತಿದ್ದರು ಎಂದರು.
ಇದೇ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರ ಸಚಿವರಾದ ಬಳಿಕ ಅಂಗಡಿ ಅವರು ಅತ್ಯಂತ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಕೂಡ ಸುರೇಶ್ ಅಂಗಡಿ ಅವರೊಂದಿಗಿನ ಒಡನಾಟ ನೆನೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪತ್ನಿ ಮಂಗಲಾ ಸುರೇಶ್ ಅಂಗಡಿ, ಮಕ್ಕಳಾದ ಶ್ರದ್ಧಾ ಹಾಗೂ ಸ್ಫೂರ್ತಿ, ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೇರಿದಂತೆ ಹಿರಿಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.