ಬೆಳಗಾವಿ: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ ಶ್ಯಾಮ ಪ್ರಸಾದ್ ಮುಖರ್ಜಿ ವೇದಿಕೆಯಲ್ಲಿ ಅಂದಾಜು 671.28 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನವಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಜನರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು. ಸರ್ಕಾರ ಜನಪ್ರಿಯವಾದರೆ ಸಾಲದು; ಜನಪರ ಸರ್ಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ. ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1800 ಗ್ರಾಮ ಪಂಚಾಯಿತಿ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.
ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ: ಗಡಿಯಾಚೆ ಇರುವವರು ನಮ್ಮವರು; ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರ್ಕಾರ ಕಡೆಗಣಿಸಿರುವುದರಿಂದ. ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿರುವುದಿಲ್ಲ. ಗಡಿಭಾಗದ ಶಾಲೆಗಳ ಅಭಿವೃದ್ದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ಗೋವಾದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ.
ಅದೇ ರೀತಿ ಸೋಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ ಹತ್ತು ಕೋಟಿ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಹತ್ತು ಲಕ್ಷಕ್ಕೂ ಅಧಿಕ ಮಕ್ಕಳಿಗೆ 600 ಕೋಟಿ ರೂಪಾಯಿ ಶಿಷ್ಯವೇತನವನ್ನು ರೈತ ವಿದ್ಯಾನಿಧಿ ಯೋಜನೆ ಮೂಲಕ ಒದಗಿಸಲಾಗಿದೆ. ಇದೇ ರೀತಿ ಕೃಷಿ ಕೂಲಿಕಾರರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.
ಸರ್ವರ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವದ ಶಕ್ತಿ: ಎಲ್ಲ ಸಮುದಾಯಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. ಕಾಯಕ, ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಎಲ್ಲ ವರ್ಗದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ನೆರವು ನೀಡುತ್ತಿದೆ. ನಮ್ಮ ಕ್ಲಿನಿಕ್, ಶಾಲಾ ಕೊಠಡಿಗಳ ನಿರ್ಮಾಣ, ಆರೋಗ್ಯ ಸೌಲಭ್ಯ ಹೆಚ್ಚಳ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಪ್ರಜಾಪ್ರಭುತ್ವ ಎಂದರೆ ಮತ ಹಾಕುವುದು ಮಾತ್ರವಲ್ಲ; ದೇಶ ಕಟ್ಟುವುದರಲ್ಲಿ ಸರ್ವರ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವದ ಶಕ್ತಿಯಾಗಿದೆ ಎಂದರು.
ಬೆಳಗಾವಿ ಕರ್ನಾಟಕದ ಕಿರೀಟ: ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು ರಾಜ್ಯದ ಕಿರೀಟವಿದ್ದಂತೆ. ಈ ಜಿಲ್ಲೆಯ ನೀರಾವರಿ, ಕೈಗಾರಿಕೋದ್ಯಮ, ಕೃಷಿ ಅಭಿವೃದ್ಧಿಗೆ ಸರ್ಕಾರ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು. ಉತ್ತರ ಕರ್ನಾಟಕದ ಸಮಗ್ರ ಪ್ರಗತಿಗೆ ಮುಂಬರುವ ದಿನಗಳಲ್ಲಿ ಸರ್ಕಾರ ವಿಶೇಷ ಯೋಜನೆ ಪ್ರಕಟಿಸಲಿದೆ ಎಂದು ಹೇಳಿದರು.
ಮಹಾದೇವಪ್ಪ ಯಾದವಾಡ ಜನಪ್ರಿಯ ಅಲ್ಲ: ಜನೋಪಯೋಗಿ ಶಾಸಕರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಜನರ ಜೀವನ ಗುಣಮಟ್ಟ ಹೆಚ್ಚಿಸಿ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ರೂಪಿಸುವವರು ನಿಜವಾದ ಶಾಸಕರು. ಶಾಸಕ ಯಾದವಾಡ ಅವರು 2900 ಕೋಟಿ ರೂಪಾಯಿ ಅನುದಾನ ತಂದು ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮನೆ ಮನೆಗೆ ಗಂಗೆಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಓದಿ: ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ.. ರಾಜ್ಯದ ಪರ ಸಮರ್ಥ ವಾದ ಮಂಡನೆ: ಸಿಎಂ ಬೊಮ್ಮಾಯಿ