ಚಿಕ್ಕೋಡಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಪ್ರತಿ ತಾಲೂಕಿನ ಸರಹದ್ದಿನಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಪ್ರತಿಯೊಂದು ವಾಹನ ಹಾಗೂ ವ್ಯಕ್ತಿಗಳ ಮೇಲೆ ಅಧಿಕಾರಿಗಳು ನಿಗಾ ಇಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನಿಂದ ರಾಜ್ಯಾದ್ಯಂತ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲನೆ ಮಾಡುತ್ತಿದ್ದಾರೆ.
ಹಿರಿಯ ಅಧಿಕಾರಿಗಳಿಂದ ತರಾಟೆ: ಆದರೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಪುತ್ರ ಕಾರನ್ನು ಅಧಿಕಾರಿಗಳು ಪರಿಶೀಲನೆ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಿರಿಯ ಅಧಿಕಾರಿ ಓರ್ವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಶ್ರೀನಿವಾಸ ಪಾಟೀಲ್ ಕಾರನ್ನು ಪರಿಶೀಲಿಸದ ಅಧಿಕಾರಿಗಳು: ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಇಲ್ಲಿ ಪ್ರತಿಯೊಂದು ವಾಹನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಧಿಕಾರಿಗಳು ಅವರ ಕಾರನ್ನು ಪರಿಶೀಲನೆ ಮಾಡದೆ ಹಾಗೆ ಬಿಟ್ಟಿದ್ದರಿಂದ ಕೆಲವು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಮೌಖಿಕವಾಗಿ ದೂರು ಸಲ್ಲಿಸಿದ ಹಿನ್ನೆಲೆ ಸ್ಥಳಕ್ಕೆ ಕಾಗವಾಡ ತಹಶೀಲ್ದಾರ್ ಎಂ ಎಂ ಬಳೇಗಾರ ಆಗಮಿಸಿ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿರುವ ಪ್ರಸಂಗ ನಡೆಯಿತು.
ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು: ಕಾಗವಾಡ ಶಾಸಕರ ಮನೆ ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಇರುವುದರಿಂದ ಕಾಗವಾಡ ಸಾಂಗ್ಲಿ ದಿನನಿತ್ಯ ಅವರು ಸಂಚಾರ ಬೆಳೆಸುವುದರಿಂದ ಅಧಿಕಾರಿಗಳು ಅವರ ಕಾರು ತಪಾಸಣೆಗೆ ಮುಂದೆ ಹೋಗದೆ ಇರೋದ್ರಿಂದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾನೂನು ಎಲ್ಲರಿಗೂ ಸಮನಾಗಿದೆ. ಇಲ್ಲಿ ರಾಜಕೀಯ ಮಕ್ಕಳಿಗೆ ಬೇರೆ ಕಾನೂನು ಇಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಕೆಲವು ಸ್ಥಳೀಯರು ತರಾಟೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಗವಾಡ ತಹಶೀಲ್ದಾರ್ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ದೌಡಾಯಿಸಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಯಾಕೆ ಶಾಸಕರ ವಾಹನ ತಪಾಸಣೆ ಮಾಡ್ಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ಜಿಲ್ಲಾ ಸಮಿತಿಗಳೊಂದಿಗಿನ ಸಭೆ ಮುಕ್ತಾಯ: ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ
ಕರ್ತವ್ಯಲೋಪ ಎಸಗಿರುವುದಾಗಿ ಆಕ್ರೋಶ: ಅಲ್ಲಿದ್ದ ತಪಾಸಣಾ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದೆಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಪ್ರತಿಯೊಂದು ವಾಹನ ತಪಾಸನೆ ಮಾಡುವಂತೆ ನಿಮಗೆ ಈಗಾಗಲೇ ಹೇಳಿದ್ದೇನೆ. ಆದರೂ ನೀವು ಕರ್ತವ್ಯ ಲೋಪ ಎಸಗಿದ್ದೀರಿ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ತಹಶೀಲ್ದಾರ್ ಅವರು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ತೊರೆದು ಗುಬ್ಬಿ ಹಿತರಕ್ಷಣಾ ಪಕ್ಷ ರಚನೆ : 9 ಮಂದಿ ಪಟ್ಟಣ ಪಂಚಾಯಿತಿ ಸದಸ್ಯರಿಂದ ಕಾಂಗ್ರೆಸ್ಗೆ ಬೆಂಬಲ