ಬೆಳಗಾವಿ: ಮಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ಮುಂಬೈಗೆ ಸ್ಮಗ್ಲಿಂಗ್ ಮಾಡಲಾಗುತ್ತಿದ್ದ 4.9 ಕೆಜಿ ಚಿನ್ನ ಕಳ್ಳತನ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣವೇ ಬೆಳಗಾವಿಯಿಂದ ಎತ್ತಂಗಡಿ ಆಗಿರುವ ಹಿರಿಯ ಅಧಿಕಾರಿಗಳೆಲ್ಲರೂ ಇದೀಗ ಸಿಐಡಿ ತನಿಖೆ ಎದುರಿಸಬೇಕಿದೆ. ಬೆಳಗಾವಿ ಉತ್ತರ ವಲಯ ನಿಕಟಪೂರ್ವ ಐಜಿಪಿ ರಾಘವೇಂದ್ರ ಸುಹಾಸ್, ಗೋಕಾಕ ಹಿಂದಿನ ಡಿವೈಎಸ್‍ಪಿ ಜಾವೇದ್ ಇನಾಮದಾರ್, ಹುಕ್ಕೇರಿ ನಿಕಟಪೂರ್ವ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಹಾಗೂ ಯಮಕನಮರಡಿ ಹಿಂದಿನ ಪಿಎಸ್‍ಐ ರಮೇಶ ಪಾಟೀಲಗೆ ಸಿಐಡಿ ನೋಟಿಸ್ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ.
ಪೊಲೀಸ್ ಅಧಿಕಾರಿಗಳಿಗೆ ಢವಢವ:
ಪ್ರಕರಣ ಸಂಬಂಧ ಈಗಾಗಲೇ ಪ್ರಕರಣದ ಕಿಂಗ್‍ಪಿನ್ ಹುಬ್ಬಳ್ಳಿ ಮೂಲದ ಮಾಜಿ ಡಿವೈಎಸ್‍ಪಿ ಪುತ್ರ ಕಿರಣ್ ವೀರನಗೌಡರ ಸಿಐಡಿ ವಶದಲ್ಲಿದ್ದಾನೆ. ಜೂನ್ 6 ರಂದು ಹುಬ್ಬಳ್ಳಿಯಲ್ಲಿ ಕಿರಣ್ ವೀರನಗೌಡರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬೆಳಗಾವಿಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು.
ಬಳಿಕ ಅಜ್ಞಾತ ಸ್ಥಳದಲ್ಲಿ ಪ್ರಕರಣ ಸಂಬಂಧ ಕಿರಣ್ ವೀರನಗೌಡರನ್ನು ಸಿಐಡಿ ತೀವ್ರ ತನಿಖೆ ನಡೆಸಿದೆ. ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾದ ಬಗ್ಗೆ ಸಿಐಡಿ ಅಧಿಕಾರಿಗಳು ಮುಂದೆ ಕಿರಣ್ ಬಾಯಿಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಈತನ ಹೇಳಿಕೆ ಆಧಾರದ ಮೇಲೆಯೇ ಇದೀಗ ಸಿಐಡಿ ಅಧಿಕಾರಿಗಳು ನಿಕಟಪೂರ್ವ ಐಜಿಪಿ ಸೇರಿ ಹಲವರಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ.
ಏನಿದು ಪ್ರಕರಣ?:
ಮಂಗಳೂರು ಮೂಲದ ತಿಲಕ ಪೂಜಾರಿ ಎಂಬಾತ 4.9 ಕೆಜಿ ಚಿನ್ನವನ್ನು ಅಕ್ರಮವಾಗಿ ಮುಂಬೈಗೆ ಸಾಗಿಸುತ್ತಿದ್ದನು. ಚಿನ್ನ ಸಾಗಿಸುತ್ತಿದ್ದ ವಾಹನವನ್ನು ಜನವರಿ 9 ರಂದು ಯಮಕನಮರಡಿ ಠಾಣೆ ಪೊಲೀಸರು ಸೀಜ್ ಮಾಡಿದ್ದರು. ವಾಹನ ಬಿಡಿಸಿಕೊಳ್ಳಲು ತಿಲಕ ಪೂಜಾರಿ ಕಿರಣ್ ವೀರನಗೌಡರ ಸಹಾಯ ಪಡೆದಿದ್ದ. ಇದಕ್ಕಾಗಿ ಕಿರಣ್ ಕೂಡ ತಿಲಕನಿಂದ ಮುಂಗಡವಾಗಿ 25 ಲಕ್ಷ ಹಣವನ್ನು ಪಡೆದಿದ್ದನು. ನಂತರ ಕೋರ್ಟ್‍ಗೆ ದಂಡ ವಾಹನ ಬಿಡಿಸಿಕೊಂಡಾಗ ವಾಹನದ ಏರ್‍ಬ್ಯಾಗ್‍ನಲ್ಲಿದ್ದ 4.9 ಕೆಜಿ ಚಿನ್ನ ಕಣ್ಮರೆ ಆಗಿತ್ತು.
ಈ ಬಗ್ಗೆ ತಿಲಕ ಪೂಜಾರಿ ಹಿಂದಿನ ಐಜಿಪಿ ರಾಘವೇಂದ್ರ ಸುಹಾಸ್‍ಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುವಂತೆ ಐಜಿಪಿ ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರಿಗೆ ನಿದೇಶನ ನೀಡಿದ್ದರು. ಏರ್‍ಬ್ಯಾಗ್‍ನಲ್ಲಿದ್ದ ಚಿನ್ನವನ್ನು ಕಿರಣ್ ವೀರನಗೌಡರ ಹಾಗೂ ಗೋಕಾಕ ಡಿವೈಎಸ್‍ಪಿ ಜಾವೇದ್ ಇನಾಮದಾರ್ ಕದ್ದು ಮಾರಾಟ ಮಾಡಿದ್ದು ತನಿಖೆಯಿಂದ ಬಹಿರಂಗೊಂಡಿತ್ತು. ನಂತರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.