ಬೆಳಗಾವಿ/ಗೋಕಾಕ್: ಚುನಾವಣೆಗಳಲ್ಲಿ ಫಂಡ್ನಿಂದ ಬಂದ ಹಣವನ್ನು ಸ್ವಂತಕ್ಕೆ ಉಪಯೋಗ ಮಾಡಿಕೊಂಡು ನನ್ನ ಸಾಲವನ್ನು ಪಾವತಿಸಿಲ್ಲ ಮತ್ತು ಜಾರಕಿಹೊಳಿ ಸಹೋದರರಿಂದ ಹಣ ಪಡೆದು ಸೈಲೆಂಟ್ ಆಗಿಲ್ಲ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.
ನಗರದ ಜ್ಞಾನ ಮಂದಿರದ ಆಧ್ಯಾತ್ಮ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹಿತೈಷಿಗಳ ಮತ್ತು ಬೆಂಬಲಿಗರ ಚಿಂತನ - ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಮೂರು ಚುನಾವಣೆಯಲ್ಲಿ ಹಿತೈಷಿಗಳು 8-10 ಲಕ್ಷ ರೂ.ಗಳಂತೆ ನೀಡಿದ್ದನ್ನು ಬಿಟ್ಟರೆ ಉಳಿದ ಹಣವನ್ನು ನನ್ನ ಸ್ವಂತ 31 ಎಕರೆ ಹೊಲ, 4 ಪ್ಲಾಟ್ಗಳು ಸೇರಿದಂತೆ ಬ್ಯಾಂಕ್‍ಗಳಲ್ಲಿ 1.50 ಕೋಟಿ, ವಿವಿಧ ಬ್ಯಾಂಕ್‍ಗಳಲ್ಲಿ ಸಾಲ, ಖಾಸಗಿಯಾಗಿ 2 ಕೋಟಿ ರೂ.ಗಳನ್ನು ಸಾಲ ಮಾಡಿ, ಆಸ್ತಿಗಳನ್ನು ಮಾರಿ, ಬಂಗಾರ ಅಡವಿಟ್ಟು ಚುನಾವಣೆಗೆ ಸ್ವರ್ಧಿಸಿದ್ದೇನೆಯೇ ಹೊರತು ಯಾರೊಂದಿಗೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ ಎಂದು ಭಾವುಕರಾಗಿ ಹೇಳಿದರು.
ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನನ್ನ ರಾಜಕೀಯ ನಡೆ ಇರಲಿದ್ದು ನೀವು ಕೊಟ್ಟ ನಿರ್ದೇಶನಗಳನ್ನು ಅತ್ಯಂತ ಗಂಭೀರವಾಗಿ ಚಿಂತನೆ ಮಾಡಿ, ರವಿವಾರ ಸಾಯಂಕಾಲ ಒಮ್ಮತದ ನಿರ್ಧಾರಕ್ಕೆ ಬರಲಾಗುವುದು ಎಂದರು.
ಬಿಕ್ಕಿ ಬಿಕ್ಕಿ ಅತ್ತ ಸಾಮಾಜಿಕ ಹೋರಾಟಗಾರ :
ಬಿಜೆಪಿ ಮುಖಂಡ ಅಶೋಕ ಪೂಜಾರಿ ಕರೆದಿದ್ದ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲ್ವಾನ ಅವರು, ಗೋಕಾಕ ಮತಕ್ಷೇತ್ರ ವ್ಯವಸ್ಥೆ ಬದಲು ಮಾಡಿ ಎಂದು ಬಿಕ್ಕಿ ಬಿಕ್ಕಿ ಅತ್ತು ಸಭೆಯಲ್ಲಿ ಕಣ್ಣೀರು ಹಾಕಿದ ಸನ್ನಿವೇಶ ನಡೆಯಿತು. ದಯವಿಟ್ಟು ಗೋಕಾಕ್ ಮತಕ್ಷೇತ್ರದ ವ್ಯವಸ್ಥೆ ಬದಲು ಮಾಡಿ ಎಂದು ಕಣ್ಣೀರು ಹಾಕಿ ನಮಗೆ ಏನು ಒಳ್ಳೆಯದಾಗಲಿಲ್ಲ ನಮ್ಮ ಮಕ್ಕಳಿಗಾದರೂ ಒಳ್ಳೆಯದಾಗಲಿ ಎಂದು ಬಿಕ್ಕಿ ಬಿಕ್ಕಿ ಅತ್ತು ಹೋರಾಟ ಮುಂದುವರೆಸಿ ಎಂದು ಹೇಳಿದರು.