ಚಿಕ್ಕೋಡಿ: ಸೆಪ್ಟೆಂಬರ್ 27ರಂದು ಮನೆ ಬಿಟ್ಟು ಹೋಗಿದ್ದ ಅಣ್ಣನ ಮಗನ ಬಗ್ಗೆ ಚಿಕ್ಕಪ್ಪ ದೂರು ನೀಡಿದ್ದ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನನ್ನ ಅಣ್ಣನ ಮಗ ಸೆ.27ರಂದು ಮನೆಯಿಂದ ಹೋದವನು ಮರಳಿ ಬಂದಿಲ್ಲ ಎಂದು ಕೊಲೆ ಮಾಡಿಸಿದ್ದ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಇದೀಗ ಬೆಳಗಾವಿ ಜಿಲ್ಲೆ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದ ವಿಶಾಲ ಅಲಿಯಾಸ್ ಅಪ್ಪಾಸೋ ಮಹೇಶ ಪಾಟೀಲ(25) ಕೊಲೆಯಾದ ಯುವಕನಾಗಿದ್ದಾನೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ ಬೆನಾಡಿ ಗ್ರಾಮದ ಸತೀಶ್ ದಾದಾಸಾಹೇಬ ಪಾಟೀಲ(45), ಅಮೋಲ ಪ್ರಕಾಶ ವಡ್ಡರ (36),ದಿಲೀಪ್ ಪರಶುರಾಮ ವಡ್ಡರ (38), ಬಾಬಾಸಾಹೇಬ ಪಾಂಡುರಂಗ ಕಾಂಬಳೆ (47) ಮತ್ತು ವಿಕಾಸ ವಕೀಲ ಪಾಟೀಲ(25) ಬಂಧಿತ ಆರೋಪಿಗಳಾಗಿದ್ದಾರೆ. ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಸೆ.27 ರಂದು ಬೆಳಿಗ್ಗೆ 8.30ಕ್ಕೆ ವಿಶಾಲ ಕಾರು ತೊಳೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದನು. ಆತ ವಾಪಸ್ ಬಂದಿಲ್ಲವೆಂದು ಆತನ ಚಿಕ್ಕಪ್ಪ ಸತೀಶ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೆ.30ರಂದು ದೂರು ದಾಖಲು ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅ.9 ರಂದು ವಿಶಾಲ ತೆಗೆದುಕೊಂಡು ಹೋಗಿದ್ದ ವಾಹನವನ್ನ ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಜುನೋನಿ ಗ್ರಾಮದಲ್ಲಿ ಪತ್ತೆ ಹಚ್ಚಿದ್ದರು.
ಕೂಡಲೇ ಪಿಎಸ್‍ಐ ಬಿ.ಎಸ್. ತಳವಾರ ಸ್ಥಳಕ್ಕೆ ಹೋಗಿ ತಪಾಸಣೆ ನಡೆಸಿದ್ದರು. ಈ ವೇಳೆ ದೂರು ನೀಡಿದ್ದ ಸತೀಶ್ನ ಮೇಲೆ ಅನುಮಾನ ಬಂದು ತನಿಖೆ ಮತ್ತಷ್ಟು ಚುರುಕುಗೊಳಿಸಿದರು. ಈ ವೇಳೆ ಬಾಯ್ಬಿಟ್ಟಿರುವ ಆತ ಆಸ್ತಿ ಪಾಲು ಮಾಡುವಂತೆ ಮೇಲಿಂದ ಮೇಲೆ ಜಗಳ ಮಾಡ್ತಿದ್ದನು. ಇದೇ ವಿಷಯಕ್ಕಾಗಿ ಆತ ನಮ್ಮ ತಾಯಿ ಜತೆ ಜಗಳವಾಡಿದ್ದನು. ಹೀಗಾಗಿ 6 ಲಕ್ಷ ರೂಗಳಿಗೆ ಸುಫಾರಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸೆ.27ರಂದು ಆತನ ಕೊಲೆ ಮಾಡಿ, ಕಾರಿನಲ್ಲಿ ಶವ ಹೊತ್ತೊಯ್ದು ಕೊಲ್ಹಾಪೂರ ಜಿಲ್ಲೆ ಗಗನಬಾವಡಾದ ಅನದೂರ ಗ್ರಾಮದ ಘಟ್ಟದಲ್ಲಿ ಎಸೆದಿದ್ದಾಗಿ ತಿಳಿಸಿದ್ದಾರೆ. ಜತೆಗೆ ಕಾರು ಬೇರೆ ಸ್ಥಳದಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಆರು ಲಕ್ಷ ರೂದಲ್ಲಿ 3 ಲಕ್ಷಕ್ಕೂ ಅಧಿಕ ರೂ ಖರ್ಚು ಮಾಡಿರುವ ಆರೋಪಿಗಳಿಂದ 2.83,500 ರೂ ವಶಪಡಿಸಿಕೊಂಡಿದ್ದಾರೆ. ಮೃತನ ತಲೆಬುರಡೆ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.