ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಇಂದು ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಣೆ ಮಾಡಿದರು. ಚಿಕ್ಕೋಡಿ ಪುರಸಭೆಯ ಒಂದು ದಿನದ ಆಡಳಿತವನ್ನು ಮಹಿಳೆಯರ ಕೈಗೆ ನೀಡಿ ವಿಶೇಷ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಚಿಕ್ಕೋಡಿ ಪುರಸಭೆಯಲ್ಲಿ ಮಹಿಳೆಯರಿಗೆ ಒಂದು ದಿನದ ಅಧಿಕಾರ ನಿರ್ವಹಣೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಚಿಕ್ಕೋಡಿ ಪಟ್ಟಣದ 23 ವಾರ್ಡಗಳಲ್ಲಿ ಮಹಿಳೆಯರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಮೊದಲನೇ ಸಭೆಯಲ್ಲಿ 23 ಸದಸ್ಯರು ಸೇರಿ ಮತದಾನದ ಮೂಲಕ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅಧಿಕಾರ ಸ್ವೀಕಾರ ಮಾಡಿ ಸಾಮಾನ್ಯ ಸಭೆ ಕೂಡಾ ನಡೆಸಲಾಯಿತು.
ಚಿಕ್ಕೋಡಿ ಪುರಸಭೆಯ ಒಂದು ದಿನದ ಅಧ್ಯಕ್ಷೆಯಾಗಿ ಪ್ರಿಯಾ ಕುಲಕರ್ಣಿ, ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಮಲಾಡೆ ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜ್ಯೋತಿ ಹಿರೇಮಠ ಅವರು ಚುನಾಯಿತರಾದರು. ನಂತರ ನೂತನ ಮಹಿಳಾ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಹಾಲಿ ಪುರಸಭೆಯ ಅಧ್ಯಕ್ಷರಾದ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ ಅವರು ಹೂಗುಚ್ಚ ನೀಡಿ ಗೌರವಿಸಿದರು.
ಮೊದಲನೇ ಸಭೆಯಲ್ಲಿ ವಾರ್ಡ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ತಿಳಿಸಿದರು. ಈ ಮೊದಲು 23 ವಾರ್ಡಿನ ಸದಸ್ಯರು ತಮ್ಮ ತಮ್ಮ ವಾರ್ಡಿನ ಬಗ್ಗೆ ತಿಳಿದುಕೊಳ್ಳಲು, ವಾರ್ಡಿನ ಸಮಸ್ಯೆ ಬಗ್ಗೆ ಹಾಗೂ ಕುಂದು ಕೊರತೆಗಳ ಬಗ್ಗೆ ತಿಳಿದುಕೊಳ್ಳಲು ಕಳೆದ ಒಂದು ವಾರದಿಂದ ಸಮೀಕ್ಷೆ ಮಾಡಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಚರ್ಚಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ರೀತಿಯಲ್ಲಿ ಪುರಸಭೆ ಅಧಿಕಾರ ಹಾಗೂ ಸದಸ್ಯರ ಆಡಳಿತ ವೈಖರಿ, ವಾರ್ಡಗಳ ಸಮಸ್ಯೆಗಳು ಹೇಗೆಲ್ಲ ಇರುತ್ತವೆ. ಇವೆಲ್ಲ ವಿಚಾರಗಳ ಬಗ್ಗೆ ಮಹಿಳೆಯರು ಇಂದು ಅಭ್ಯಸಿಸಿ ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ದು ವಿಶೇಷವಾಗಿತ್ತು.