ಬೆಳಗಾವಿ : ನೆರೆಹಾನಿ ಸಂದರ್ಭದಲ್ಲಿ ಉಂಟಾಗಿರುವ ಮನೆ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರವಾಗಿ ಸಮೀಕ್ಷೆ ಪೂರ್ಣಗೊಳಿಸಬೇಕು. ಸಮೀಕ್ಷೆ ಪೂರ್ಣಗೊಂಡರೆ ನಿಖರ ಅಂಕಿ-ಅಂಶಗಳ ಸಮೇತ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುತ್ತದೆ. ಆದಷ್ಟು ಬೇಗ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ನಿರ್ವಹಣೆ ಹಾಗೂ ನೆರೆಹಾನಿಗೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಶನಿವಾರ ನಡೆದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮೀಕ್ಷೆ ವಿಳಂಬಗೊಂಡಷ್ಟು ಸಮಸ್ಯೆ ಜಟಿಲಗೊಳ್ಳುತ್ತದೆ.
ಆದ್ದರಿಂದ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ ಸಂತ್ರಸ್ತರ ಖಾತೆಗೆ ಪರಿಹಾರ ಜಮೆ ಮಾಡಲು ಕ್ರಮಕೈಗೊಳ್ಳಬೇಕು. ಕಳೆದ ಬಾರಿ ಪ್ರವಾಹ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪ್ರಸಕ್ತ ಸಾಲಿನ ಪ್ರವಾಹ ಹಾನಿ ಸಮೀಕ್ಷೆ ಮಾಡುವಾಗ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಪರ್ಯಾಯ ಮಾರ್ಗಗಳ ಕುರಿತು ಪರಿಶೀಲನೆ : ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಕಿ ಉಳಿದಿರುವ ಪರಿಹಾರ ಕಂತುಗಳನ್ನು ಬಿಡುಗಡೆ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಲಿದೆ. ಮನೆ ಹಾನಿ ಲಾಗಿನ್ ಅವಧಿ ವಿಸ್ತರಣೆ, ಮನೆಗಳ ಸೂಕ್ತ ದಾಖಲಾತಿ ಇಲ್ಲದ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ಪರ್ಯಾಯ ಮಾರ್ಗಗಳ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
ಈ ರೀತಿಯ ಕುಟುಂಬಗಳ ಪ್ರತ್ಯೇಕವಾದ ಪಟ್ಟಿ ಸಿದ್ಧವಾದ ಬಳಿಕ ಹಣಕಾಸು ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಿ ಸೂಕ್ತ ನಿರ್ಧಾರ ಮಾಡಲಾಗುವುದು. ಗ್ರಾಮಸ್ಥರು ಶಾಶ್ವತ ಸ್ಥಳಾಂತರ ಬಯಸಿದ ಸಂದರ್ಭದಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದರೆ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುವುದು. ಇದಲ್ಲದೇ ನವಗ್ರಾಮ ಸೇರಿ ವಿವಿಧ ವಸತಿ ಯೋಜನೆಗಳಡಿ ಕೂಡ ಮನೆಗಳನ್ನು ಒದಗಿಸಲಾಗುವುದು ಎಂದರು.
ಬೆಳಗಾವಿ ಜಿಲ್ಲೆಗೆ ಹೆಚ್ಚುವರಿ ಲಸಿಕೆ ಪೂರೈಕೆ : ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ಸಂಪೂರ್ಣ ಗುಣಮುಖರಾಗುವವರೆಗೆ ಅವರ ಮನೆಗಳಿಗೆ ಕೂಡ ಅಗತ್ಯ ಔಷಧಿ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಪ್ರತಿದಿನ 40 ಸಾವಿರ ಲಸಿಕೆ ನೀಡುವ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿದಿನ ನೀಡಲಾಗುತ್ತಿರುವ 25 ಸಾವಿರ ಲಸಿಕೆಗಳ ಜತೆಗೆ ಹೆಚ್ಚುವರಿಯಾಗಿ ಪ್ರತಿದಿನ 25 ಸಾವಿರ ಲಸಿಕೆಗಳನ್ನು ಪೂರೈಕೆ ಮಾಡಲಾಗುವುದು ಎಂದ ಸಿಎಂ, ಹೆಚ್ಚುವರಿ ಅಗತ್ಯವಿರುವ ಲಸಿಕೆಗಳ ಪ್ರಮಾಣದ ಬಗ್ಗೆ ಕೂಡಲೇ ಪ್ರಸ್ತಾಪವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ತವ್ಯಕ್ಕೆ ಹಾಜರಾಗದ ವೈದ್ಯರ ನೇಮಕಾತಿ ರದ್ದು : ಹೊಸದಾಗಿ ನೇಮಕಗೊಂಡು ಈವರೆಗೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕೂಡಲೇ ನೋಟಿಸ್ ನೀಡಬೇಕು. ಆದಾಗ್ಯೂ ಹಾಜರಾಗದಿದ್ದರೆ ಅವರ ನೇಮಕಾತಿ ರದ್ದುಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಕಡೆಯ ಸಿಬ್ಬಂದಿ ಹಾಗೂ ವೈದ್ಯರ ನಿಯೋಜನೆಯನ್ನು ರದ್ದುಗೊಳಿಸಬೇಕು. ಕೆಲಸದ ಒತ್ತಡ ಆಧರಿಸಿ ತಾತ್ಕಾಲಿಕವಾಗಿ ಅಗತ್ಯವಿರುವ ಕಡೆಗಳಲ್ಲಿ ಮಾತ್ರ ನಿಯೋಜಿಸಬೇಕು. ಡಯಾಲಿಸಿಸ್ ಚಿಕಿತ್ಸೆಗೆ ದೊರಕದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
ಕೋವಿಡ್ ಪರೀಕ್ಷೆ ಹೆಚ್ಚಿಸಲು ನಿರ್ದೇಶನ : ಗಡಿ ಜಿಲ್ಲೆಯಾಗಿರುವುದರಿಂದ ತೀವ್ರ ನಿಗಾವಹಿಸಬೇಕು. ಎಲ್ಲಿ ಸೋಂಕು ಕಂಡು ಬರುತ್ತದೆಯೋ ಅಂತಹ ಪ್ರದೇಶಗಳಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಿಎಂ ಬೊಮ್ಮಾಯಿ ನಿರ್ದೇಶನ ನೀಡಿದರು. ಗಡಿಭಾಗದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಎಲ್ಲ ಹಿರಿಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು.
ರೈಲು ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಆರಂಭಿಸಬೇಕು. ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ಆಕ್ಸಿಜನ್ ಘಟಕಗಳನ್ನ ಕಾರ್ಯಾರಂಭಿಸಬೇಕು. ಪ್ರತಿದಿನ ಐದು ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಒಂದು ಕೋಟಿ ಲಸಿಕೆಗಳನ್ನು ಪೂರೈಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.
ಲಸಿಕೆ ಬಳಕೆಯನ್ನು ಆಧರಿಸಿ ಲಸಿಕೆ ಪೂರೈಕೆ ಮಾಡುವುದರಿಂದ ಪ್ರತಿ ಜಿಲ್ಲೆಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಗರಿಷ್ಠ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ದೈನಂದಿನ ಲಸಿಕಾ ಪ್ರಮಾಣ ಆಧರಿಸಿ ಲಸಿಕೆಯನ್ನು ಪೂರೈಸಲಾಗುವುದು. ಆದ್ದರಿಂದ ಲಸಿಕೆ ಪೂರೈಕೆಯಾದ ತಕ್ಷಣವೇ ಅವುಗಳನ್ನು ಜನರಿಗೆ ನೀಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: WATCH: ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಪ್ರವಾಸಿಗ.. ನೋಡ ನೋಡುತ್ತಲೇ ಕೊಚ್ಚಿ ಹೋದ ವ್ಯಕ್ತಿ!
ಮೂರನೇ ಅಲೆ ನಿರ್ವಹಣೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಶಾಲೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ಒದಗಿಸಬೇಕು. ಚಿಕಿತ್ಸೆ ಅಗತ್ಯವಿರುವ ಮಕ್ಕಳಿಗೆ ತಕ್ಷಣವೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು. ಕೋವಿಡ್ ಅಥವಾ ಅಪೌಷ್ಟಿಕತೆಯಿಂದ ಯಾವುದೇ ಮಗುವಿಗೆ ತೊಂದರೆಯಾಗುವುದನ್ನು ಸಹಿಸುವುದಿಲ್ಲ ಎಂದು ಸಿಎಂ ಅಧಿಕಾರಿಗಳಿಗೆ ಎಚ್ಚರಿಸಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಬಾಕಿ ವೇತನ ಪಾವತಿಗೆ ಅಗತ್ಯ ಅನುದಾನ ನೀಡಲಾಗುವುದು. ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿರುವುದರಿಂದ ಹೊಸ ತಾಲೂಕುಗಳ ಆಧಾರದ ಮೇರೆಗೆ ಆಸ್ಪತ್ರೆ ಸ್ಥಾಪನೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ವಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಚಿಕ್ಕೋಡಿ ಕೋವಿಡ್ ಪರೀಕ್ಷಾ ಲ್ಯಾಬ್ ಉದ್ಘಾಟನೆ : ಕೋವಿಡ್ ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದರ ಜತೆಗೆ ತ್ವರಿತವಾಗಿ ತಪಾಸಣಾ ವರದಿ ನೀಡಲು ಅನುಕೂಲವಾಗುವಂತೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ನೂತನ ಕೋವಿಡ್ ಆರ್‌ಟಿಪಿಸಿಆರ್ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನ್ಲೈನ್ ಮೂಲಕ ಉದ್ಘಾಟಿಸಿದರು.