ಬೆಳಗಾವಿ/ಬೆಂಗಳೂರು: ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಬರುವ ಹಣ ಕಡಿಮೆಯಾಗುತ್ತಿದೆ. ಹಾಗಾಗಿ ರಾಜ್ಯದ ಮೇಲಿನ ಅವಲಂಬನೆಯೇ ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೆಲ ಯೋಜನೆಗಳಿಗೆ ಹಣ ಬಂದಿದೆ. ಇನ್ನು ಕೆಲವು ಯೋಜನೆಗಳಿಗೆ ಹಣ ಬಂದಿಲ್ಲ. ಬರುವ ನಿರೀಕ್ಷೆ ಇದೆ. ಮಾರ್ಚ್‌ವರೆಗೂ ಸಮಯ ಇದೆ. ಹಾಗಾಗಿ ಕೊಡುವ ನಿರೀಕ್ಷೆಯಲ್ಲಿ ನಮ್ಮ ಸರ್ಕಾರ ಇದೆ ಎಂದರು.
ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಶೇ.25ರಷ್ಟು ಅನುದಾನ ಕಡಿತವಾಗಿದೆ. ಇದಕ್ಕಾಗಿ 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿದ್ದರೂ ಅದು ಕೊಟ್ಟಿಲ್ಲ. ಅಂತಿಮ ವರದಿ ಕೊಟ್ಟಾಗ 6 ಸಾವಿರ ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿದ್ದರು. ಈ ಎರಡೂ ಅನುದಾನ ನಮಗೆ ಬಂದಿಲ್ಲ. ಈ ಸಂಬಂಧ ಅಕ್ಟೋಬರ್ನಲ್ಲಿ 11,695 ಕೋಟಿ ಅನುದಾನ ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. ಹಣವೂ ಬಂದಿಲ್ಲ. ಜಿಎಸ್ಟಿ ಪರಿಹಾರ 2,333 ಕೋಟಿ ಬಾಕಿ ಇತ್ತು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದು, 1,191 ಕೋಟಿ ರೂ ಬಿಡುಗಡೆಯಾಗಿದೆ. ಇನ್ನು1,141 ಕೋಟಿ ಬಾಕಿ ಇದೆ. ಇವರೆಡೂ ಕೇಂದ್ರದಿಂದ ಬರಬೇಕಿದೆ, ಎರಡಕ್ಕೂ ಪ್ರಯತ್ನ ಮಾಡಿದ್ದೇವೆ. ಇನ್ನು ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣಕಾಸಿನ ಗಾತ್ರ ಕಡಿಮೆಯಾಗುತ್ತಿದೆ. ಕೇಂದ್ರಕ್ಕೆ ಬರುವ ಒಟ್ಟು ತೆರಿಗೆಯಲ್ಲಿ ನಮ್ಮ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ, ಹೀಗೆ ಎರಡು ರೀತಿ ನಮಗೆ ಕೇಂದ್ರದಿಂದ ಅನುದಾನ ಬರಲಿದೆ. ಎರಡನ್ನೂ ನೋಡಿದರೆ ಈ ಬಾರಿ 56 ಸಾವಿರ ಕೋಟಿ ಬರಬಹುದು ಎಂದು ಅಂದಾಜಿಸಿದ್ದೇವೆ. ಈ ಬಾರಿ ನಮ್ಮ ಬಜೆಟ್ 3.27 ಲಕ್ಷ ಕೋಟಿ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಾಗ 2017-18ರಲ್ಲಿ 43,369 ಕೋಟಿ ಬಂದಿತ್ತು. ಅಂದು ನಮ್ಮ ಬಜೆಟ್ 1.86 ಲಕ್ಷ ಕೋಟಿ ಇತ್ತು. ನಮ್ಮ ಬಜೆಟ್ನ ಶೇ.23ರಷ್ಟು ಹಣ ಕೇಂದ್ರದಿಂದ ಬಂದಿತ್ತು. ಈ ವರ್ಷ ಇದು ಶೇ.17.5ಕ್ಕೆ ಇಳಿದಿದೆ. ಅದೇ ಶೇ. 23ರಷ್ಟು ಇದ್ದಿದ್ದರೆ 76 ಸಾವಿರ ಕೋಟಿ ಬರುತ್ತಿತ್ತು. ಆದರೆ ನಮ್ಮ ಅಂದಾಜು ಇರುವುದು 56 ಸಾವಿರ ಕೋಟಿ ಮಾತ್ರ. ಜಿಎಸ್ಟಿ ಪರಿಹಾರದಲ್ಲಿಯೂ 23 ಸಾವಿರ ಕೋಟಿ ರೂ. ಬರುವುದು ಕಡಿಮೆಯಾಗಿದೆ. ಎಲ್ಲ ನೋಡಿದರೆ 40 ಸಾವಿರ ಕೋಟಿ ಹಣ ಕೇಂದ್ರದಿಂದ ಬರಬೇಕಿರುವುದು ಕಡಿಮೆಯಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 53 ಬಾಂಗ್ಲಾ ವಲಸಿಗರು ಪತ್ತೆ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ. ಒಟ್ಟು 53 ಬಾಂಗ್ಲಾ ವಲಸಿಗರು ರಾಜ್ಯದಲ್ಲಿ ಇದ್ದಾರೆ. ಅವರನ್ನು ವಾಪಸ್ ಕಳುಹಿಸುವ ಕಾರ್ಯ ನಡೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಉತ್ತರ ಭಾರತದ ಗಡಿಯಲ್ಲೇ ಅಕ್ರಮ ಪ್ರವೇಶ ತಡೆಯುವ ಯತ್ನ ನಡೆದಿದೆ. ಆದಾಗ್ಯೂ ಎಲ್ಲಿಂದಲೋ ನುಸುಳಿ ಭಾರತಕ್ಕೆ ಬರುತ್ತಾರೆ. ನಮ್ಮಲ್ಲಿ ಅಂತಹವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಂಗ್ಲಾ ವಲಸಿಗರು ಒಟ್ಟು 53 ಜನ ರಾಜ್ಯದಲ್ಲಿ ಇದ್ದಾರೆ. ಅವರನ್ನು ವಾಪಸ್ ಕಳುಹಿಸುವ ಕಾರ್ಯ ನಡೆದಿದೆ. ಐದು ರಾಜ್ಯಗಳಲ್ಲಿ ಹೆಚ್ಚು ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯದಲ್ಲಿ 28 ಹಾಟ್ ಸ್ಪಾಟ್ ಗಳು ಇದ್ದು, ನಕಲಿ ಆಧಾರ್ ಕಾರ್ಡ್ ಮಾಡಲು ಏಜೆಂಟ್ ಗಳು ಹುಟ್ಟಿಕೊಂಡಿದ್ದಾರೆ. ಅವರನ್ನೆಲ್ಲ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ರಾಜ್ಯದ ಗಡಿಯಲ್ಲೇ ಮಾನಿಟರ್ ಮಾಡೋದು ಕಷ್ಟ ಆದರೂ ಪ್ರಯತ್ನ ಮಾಡುತ್ತೇವೆ ಎಂದರು.
ಹಾಸನ ಪೊಲೀಸ್ ಅಧಿಕಾರಿ ಅಮಾನತು: ಪೊಲೀಸರಿಗೆ ಸಂಬಂಧ ಇಲ್ಲದ ಕೆಲಸ ಮಾಡಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅದರಂತೆ ಹಾಸನದ ಜಯಪ್ರಕಾಶ್ ಎನ್ನುವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರು ಹಾಸನದಲ್ಲಿ 3 ವರ್ಷಗಳಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ದ 52 ದೂರು ದಾಖಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು, ಜಯಪ್ರಕಾಶ್ ಎಂಬ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಪೊಲೀಸರಿಗೆ ಸಂಬಂಧ ಇಲ್ಲದ ಕೆಲಸ ಮಾಡಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಪೊಲೀಸ್ ಅಧಿಕಾರಿ ವಿರುದ್ಧ ಮೂರು ಪ್ರಮುಖ ಆರೋಪಗಳಿವೆ. ಗೋ ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣ ಇದೆ. ಕಾಂಗ್ರೆಸ್ಗೆ ಮತ ಹಾಕಿ ಎಂದು ಜಯಪ್ರಕಾಶ್ ಹೇಳಿದ್ದ. ಆದಾಗ್ಯೂ ಆತನ ಮೇಲೆ ಕ್ರಮ ಆಗಿದೆ ಎಂದರು.
ಇದನ್ನೂ ಓದಿ: ಕಾರವಾರದ ಜಿಲ್ಲಾಸ್ಪತ್ರೆ ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ : ಸಚಿವ ಶರಣಪ್ರಕಾಶ ಪಾಟೀಲ್